ದೇಶದಲ್ಲಿ ಎಲ್ಲಾ ಪ್ರಯಾಣಿಕ ರೈಲುಗಳನ್ನ ಮರು ಪ್ರಾರಂಭ ಮಾಡುವ ಬಗ್ಗೆ ಇಲ್ಲಿಯವರೆಗೆ ಯಾವುದೇ ದಿನಾಂಕವನ್ನ ನಿಗದಿ ಪಡಿಸಿಲ್ಲ ಎಂದು ಭಾರತೀಯ ರೈಲ್ವೆ ಇಲಾಖೆ ಸ್ಪಷ್ಟ ಮಾಹಿತಿ ನೀಡಿದೆ. ಭಾರತೀಯ ರೈಲ್ವೆ ಇಲಾಖೆಯು ಏಪ್ರಿಲ್ನಿಂದ ದೇಶದಲ್ಲಿ ಎಲ್ಲಾ ರೈಲುಗಳ ಪ್ರಯಾಣವನ್ನ ಪುನಾರಂಭಿಸಲಿದೆ ಎಂದು ಮಾಧ್ಯಮಗಳಲ್ಲಿ ವರದಿ ಬಂದ ಬೆನ್ನಲ್ಲೇ ಈ ಸ್ಪಷ್ಟನೆಯನ್ನ ನೀಡಿದೆ.
ಕೊರೊನಾದಿಂದ ರಾಷ್ಟ್ರೀಯ ಲಾಕ್ಡೌನ್ ಜಾರಿಯಾದ ಬಳಿಕ ಮಾರ್ಚ್ನಿಂದ ಪ್ರಯಾಣಿಕರ ರೈಲುಗಳನ್ನ ಬಂದ್ ಮಾಡಲಾಗಿತ್ತು. ಈಗೀಗ ಒಂದೊಂದೆ ರೈಲುಗಳ ಪ್ರಯಾಣಕ್ಕೆ ಭಾರತೀಯ ರೈಲು ಇಲಾಖೆ ಹಸಿರು ನಿಶಾನೆ ತೋರುತ್ತಿದೆ.
ಏಪ್ರಿಲ್ ತಿಂಗಳ ನಿರ್ದಿಷ್ಟ ದಿನಾಂಕದಿಂದ ಪೂರ್ಣ ಪ್ರಮಾಣದಲ್ಲಿ ರೈಲು ಸೇವೆಗಳನ್ನ ದೇಶದಲ್ಲಿ ಪುನಾರಂಭಿಸುವ ಬಗ್ಗೆ ಮಾಧ್ಯಮಗಳಲ್ಲಿ ಹಲವಾರು ವರದಿ ಬಂದಿದೆ. ಹೀಗಾಗಿ ಈ ಸ್ಪಷ್ಟನೆಯನ್ನ ನೀಡುತ್ತಿದ್ದೇವೆ. ಎಲ್ಲಾ ಪ್ರಯಾಣಿಕ ರೈಲುಗಳನ್ನ ಪುನಾರಂಭ ಮಾಡುವ ಬಗ್ಗೆ ಇನ್ನೂ ಯಾವುದೇ ನಿರ್ದಿಷ್ಟ ದಿನಾಂಕವನ್ನ ನಿಗದಿ ಮಾಡಲಾಗಿಲ್ಲ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ರೈಲು ಸೇವೆಯನ್ನ ಕ್ರಮೇಣವಾಗಿ ಹೆಚ್ಚಿಸಲಾಗುತ್ತಿದೆ. ಈಗಾಗಲೇ 65 ಪ್ರತಿಶತಕ್ಕೂ ಹೆಚ್ಚು ರೈಲುಗಳು ಓಡಾಡುತ್ತಿವೆ. ಜನವರಿ ತಿಂಗಳಲ್ಲೇ 250ಕ್ಕೂ ಅಧಿಕ ರೈಲುಗಳನ್ನ ಸೇರಿಸಲಾಗಿದೆ. ಕ್ರಮೇಣವಾಗಿ ರೈಲು ಸೇವೆಯನ್ನ ಹೆಚ್ಚಿಸಲಾಗುವುದು. ರೈಲು ಸೇವೆ ಕುರಿತಂತೆ ಪ್ರಕಟಣೆ ಮೂಲಕ ವರದಿ ನೀಡಲಾಗುತ್ತದೆ. ಅಲ್ಲಿಯವರೆಗೆ ಯಾವುದೇ ಊಹಾಪೋಹಗಳಿಗೆ ಕಿವಿಗೊಡದಿರಿ ಎಂದು ಭಾರತೀಯ ರೈಲ್ವೆ ಇಲಾಖೆ ಮನವಿ ಮಾಡಿದೆ.