ಅಪಾಯಕಾರಿ ಸನ್ನಿವೇಶದಲ್ಲಿ ಕೆಚ್ಚೆದೆಯಿಂದ ಹೋರಾಡುವ, ಎನ್.ಎಸ್.ಜಿ. ಕಮಾಂಡೋ ಪಡೆ ಕುರಿತಂತೆ ಒಂದಿಷ್ಟು ಮಾಹಿತಿ ಇಲ್ಲಿದೆ. ಅಮೃತಸರದ ಗೋಲ್ಡನ್ ಟೆಂಪಲ್ ನಲ್ಲಿ 1984ರಲ್ಲಿ ಭಾರತೀಯ ಸೇನೆ ನಡೆಸಿದ ಆಪರೇಷನ್ ಬ್ಲೂ ಸ್ಟಾರ್ ಕಾರ್ಯಾಚರಣೆ ನಂತರ ಎನ್.ಎಸ್.ಜಿ. ಕಮಾಂಡೋ ಪಡೆ ರಚಿಸಲಾಯಿತು.
26/11ರ ಮುಂಬೈ ಮೇಲಿನ ದಾಳಿ ಮತ್ತು ಪಠಾಣ್ ಕೋಟ್ ಮೇಲಿನ ಉಗ್ರರ ದಾಳಿಯ ಸಂದರ್ಭದಲ್ಲಿ, ಎನ್.ಎಸ್.ಜಿ. ಪಡೆ ಮಹತ್ವದ ಕಾರ್ಯಾಚರಣೆ ನಡೆಸಿ, ಉಗ್ರರನ್ನು ಸದೆಬಡಿಯುವಲ್ಲಿ ಯಶಸ್ವಿಯಾಗಿದೆ. ಜರ್ಮನಿಯ ಜಿ.ಎಸ್.ಜಿ.9 ಮಾದರಿಯಲ್ಲಿ ದೇಶದಲ್ಲಿ ಎನ್.ಎಸ್.ಜಿ. ಸ್ಥಾಪಿಸಲಾಗಿದೆ. ಭಾರತೀಯ ಸೇನೆ ಮತ್ತು ಕೇಂದ್ರೀಯ ಪೊಲೀಸ್ ಸಿಬ್ಬಂದಿಗಳನ್ನು ಎನ್.ಎಸ್.ಜಿ. ಪಡೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಉಗ್ರರ ವಿರುದ್ಧದ ಹೋರಾಟ, ಕಠಿಣ ಪರಿಸ್ಥಿತಿ ಎದುರಿಸಲು ಅವರಿಗೆ ವಿಶೇಷ ತರಬೇತಿಯನ್ನು ನೀಡಲಾಗುತ್ತದೆ. ಉಗ್ರರು ಜನರನ್ನು ಒತ್ತೆಯಾಳಾಗಿರಿಸಿಕೊಂಡ ಸಂದರ್ಭದಲ್ಲಿ ಪರಿಸ್ಥಿತಿ ನಿಭಾಯಿಸುವುದನ್ನು ಕಲಿಸಲಾಗುತ್ತದೆ. ಅಲ್ಲದೇ, ವಿಐಪಿಗಳ ರಕ್ಷಣೆಯನ್ನು ಮಾಡುತ್ತದೆ ಈ ಪಡೆ. ಪಡೆಯಲ್ಲಿರುವ ಅರ್ಧದಷ್ಟು ಮಂದಿಯನ್ನು ಬ್ಲಾಕ್ ಕ್ಯಾಟ್ ಎಂದು ಹೇಳಲಾಗುತ್ತದೆ. ಆಯ್ಕೆ ಮಾಡಿಕೊಳ್ಳುವ ಮೊದಲು 90 ದಿನ ತರಬೇತಿ ನೀಡಲಾಗುವುದು.
ಆಯ್ಕೆಯಾದ ಬಳಿಕ 9 ತಿಂಗಳ ಕಠಿಣ ತರಬೇತಿ ನೀಡಲಾಗುತ್ತದೆ. ಎನ್.ಎಸ್.ಜಿ. ಕಮಾಂಡೋಗಳು, ಜರ್ಮನ್ ಹೆಕ್ಲರ್ ಅಂಡ್ ಕೋಚ್ ಎಂಪಿ5 ಸಬ್ ಮೆಷಿನ್ ಗನ್, ಕೋಚ್ ಪಿ.ಎಸ್.ಜಿ.1 ಸ್ನೈಪರ್ ರೈಫಲ್ಸ್, ಆಸ್ಟ್ರಿಯನ್ ಗ್ಲಾಕ್ -17 ಪಿಸ್ತೂಲ್, ಸ್ವಿಸ್ ಎಸ್ಐಜಿ ಎಸ್.ಜಿ. 551 ಅಸಲ್ಟ್ ರೈಫಲ್ಸ್ ಮೊದಲಾದ ಶಸ್ತ್ರಗಳನ್ನು ಹೊಂದಿರುತ್ತಾರೆ. ಅವರ ಶೂಟಿಂಗ್ ಗುರಿ ನಿಖರವಾಗಿರುತ್ತದೆ. ತುರ್ತು ಸಂದರ್ಭ ನಿಭಾಯಿಸಲು ಈ ಪಡೆ ಸದಾ ಸಿದ್ಧವಾಗಿರುತ್ತದೆ.