
ನವದೆಹಲಿ: ಗಡಿಯಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿರುವ ಹಿನ್ನೆಲೆಯಲ್ಲಿ ಚೀನಾದ ಆಕ್ರಮಣಕಾರಿ ಚಟುವಟಿಕೆಗಳಿಗೆ ತಿರುಗೇಟು ನೀಡಲು ಭಾರತೀಯ ಸೇನೆಗೆ ಸೂಚಿಸಲಾಗಿದ್ದು ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ.
ಪೂರ್ವ ಲಡಾಖ್ ಗಾಲ್ವನ್ ಕಣಿವೆಯಲ್ಲಿ ನಡೆದ ಘರ್ಷಣೆಯ ನಂತರ ಉಭಯ ಸೇನೆಗಳನ್ನು ಗಡಿಯಲ್ಲಿ ಜಮಾವಣೆಗೊಳಿಸಲಾಗಿದೆ. ಇದೇ ವೇಳೆ ದೆಹಲಿಯಲ್ಲಿ ಉನ್ನತ ಮಟ್ಟದ ಸಭೆ ನಡೆಸಲಾಗಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಗಡಿಯುದ್ದಕ್ಕೂ ಸನ್ನದ್ಧ ಸ್ಥಿತಿಯಲ್ಲಿ ಇರುವ ಭಾರತೀಯ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ ಎಂದು ಹೇಳಲಾಗಿದೆ.
ರಾಜನಾಥ್ ಸಿಂಗ್ ಅವರೊಂದಿಗಿನ ಸಭೆಯಲ್ಲಿ ಮೂರು ರಕ್ಷಣಾ ಪಡೆಗಳ ಮುಖ್ಯಸ್ಥ ಜ. ಬಿಪಿನ್ ರಾವತ್, ಸೇನಾಮುಖ್ಯಸ್ಥ ಎಂ.ಎಂ. ನರವನೆ, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಕರಮ್ ಬಿರ್ ಸಿಂಗ್, ಏರ್ ಚೀಫ್ ಮಾರ್ಷಲ್ ಆರ್.ಎಸ್.ಕೆ. ಬದೋರಿಯಾ ಅರು ಭಾಗಿಯಾಗಿದ್ದು, ಗಡಿಯಲ್ಲಿ ಚೀನಾ ಸೇನೆಯಿಂದ ಎದುರಾಗುವ ಎಲ್ಲ ಅಪಾಯಗಳನ್ನು ತಡೆಯಲು ಸೇನೆಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ ಎನ್ನಲಾಗಿದೆ.