ನವದೆಹಲಿ: ಕೊರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ಪ್ರಮುಖ ಬೆಳವಣಿಗೆ ನಡೆದಿದೆ. ಲಸಿಕೆ ಪ್ರಯೋಗದ ಪ್ರಮುಖ ಪ್ರಗತಿ ಮಾಹಿತಿಯನ್ನು ನೀತಿ ಆಯೋಗದ ಸದಸ್ಯ ವಿ.ಕೆ. ಪಾಲ್ ತಿಳಿಸಿದ್ದಾರೆ.
ದೇಶಿಯವಾಗಿ ಅಭಿವೃದ್ಧಿಪಡಿಸಲಾದ ಸಂಭಾವ್ಯ ಕೋವಿಡ್-19 ಲಸಿಕೆ ಭಾರತದಲ್ಲಿ ಮೂರನೇ ಹಂತದ ಪ್ರಯೋಗ ಪ್ರಾರಂಭಿಸಲು ಸಿದ್ಧತೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ. ಆದರೂ ಸಂಭಾವ್ಯ ಕೋವಿಡ್-19 ಲಸಿಕೆ ಹೆಸರು ಮತ್ತು ವಿವರಗಳನ್ನು ಅವರು ಬಹಿರಂಗಪಡಿಸಿಲ್ಲ.
ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರೋತ್ಸವದ ಭಾಷಣದ ಸಂದರ್ಭದಲ್ಲಿ ಕೊರೊನಾ ಲಸಿಕೆ ವಿಚಾರಕ್ಕೆ ಸಂಬಂಧಿಸಿದಂತೆ ದೇಶದ ಜನತೆಗೆ ಭರವಸೆ ನೀಡಿದ್ದರು. ಭಾರತದಲ್ಲಿ 3 ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಪ್ರಯೋಗದ ವಿವಿಧ ಹಂತಗಳಲ್ಲಿವೆ ಎಂದು ತಿಳಿಸಿದ್ದರು.
ಇಂದು ಅಥವಾ ನಾಳೆ ಮೂರನೇ ಹಂತದ ಪ್ರಯೋಗಕ್ಕೆ ಲಸಿಕೆ ಬಳಕೆಯಾಗಲಿದೆ ಎಂದು ನೀತಿ ಆಯೋಗದ ಸದಸ್ಯ ವಿ.ಕೆ. ಪಾಲ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಭಾರತದಲ್ಲಿ ಪ್ರಮುಖವಾಗಿ ಕೊವ್ಯಾಕ್ಸಿನ್ ಮತ್ತು ಜೈಕೋವ್ -ಡಿ ಲಸಿಕೆಗಳನ್ನು ಮಾನವ ಪ್ರಯೋಗಗಳಿಗೆ ಒಳಪಡಿಸಲಾಗಿದೆ.
ಭಾರತ್ ಬಯೋಟೆಕ್ ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಹಾಗೂ ಪುಣೆಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಅಭಿವೃದ್ಧಿಪಡಿಸುತ್ತಿರುವ ಕೊವ್ಯಾಕ್ಸಿನ್ ಮೊದಲ ಹಂತದ ಮಾನವ ಪ್ರಯೋಗ ಪೂರ್ಣಗೊಂಡಿದ್ದು ಎರಡನೇ ಹಂತದ ಪ್ರಯೋಗ ಕೂಡ ಆರಂಭವಾಗಿದೆ. ಕೊವ್ಯಾಕ್ಸಿನ್ ಲಸಿಕೆಯ ಮಾನವ ಪ್ರಯೋಗಗಳು ಭಾರತದಾದ್ಯಂತ 12 ಸ್ಥಳಗಳಲ್ಲಿ ನಡೆಯುತ್ತಿವೆ. ಜೈಕೋವ್ –ಡಿ ಸಂಭಾವ್ಯ ಕೋವಿಡ್ ಲಸಿಕೆ ಮೂರನೇ ಹಂತದ ಮಾನವ ಪ್ರಯೋಗ ಪ್ರಾರಂಭವಾಗಿದೆ ಎಂದು ಹೇಳಲಾಗಿದೆ.