ಕೋವಿಡ್-19 ವಿರುದ್ಧ ಇಡೀ ದೇಶದ ನಿವಾಸಿಗಳಿಗೆ ಚುಚ್ಚುಮದ್ದು ಹಾಕಿಸಲೆಂದು ಕೇಂದ್ರ ಸರ್ಕಾರವು $7 ಶತಕೋಟಿ (51 ಸಾವಿರ ಕೋಟಿ ರೂ.ಗಳು) ತೆಗೆದಿರಿಸಿದೆ ಎಂದು ಕೆಲವೊಂದು ಸುದ್ದಿ ಮೂಲಗಳು ತಿಳಿಸಿವೆ.
130 ಕೋಟಿ ಜನಸಂಖ್ಯೆಯ ದೇಶದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಕೋವಿಡ್-19 ವಿರೋಧಿ ಚುಚ್ಚು ಮದ್ದು ಹಾಕಿಸಲು 450-550 ರೂ./ಪ್ರತಿ ವ್ಯಕ್ತಿಯಂತೆ ಖರ್ಚು ತಗುಲುವ ಅಂದಾಜನ್ನು ಮೋದಿ ಸರ್ಕಾರ ಮಾಡುತ್ತಿದೆ. ಮಾರ್ಚ್ 31ಕ್ಕೆ ಅಂತ್ಯವಾಗಲಿರುವ ಪ್ರಸಕ್ತ ವಿತ್ತೀಯ ವರ್ಷಕ್ಕೆ ಅನ್ವಯವಾಗುವಂತೆ ಈ ದುಡ್ಡನ್ನು ಅನುಮೋದನೆ ಮಾಡಲಾಗುತ್ತಿದೆ.
ಪ್ರತಿಯೊಬ್ಬ ವ್ಯಕ್ತಿಗೂ $2ಗಳ ವೆಚ್ಚದ ಎರಡು ಇಂಜೆಕ್ಷನ್‌ಗಳನ್ನು ಕೊಡಲಾಗುವುದು ಎನ್ನಲಾಗುತ್ತಿದೆ. ಮಿಕ್ಕಂತೆ ಪ್ರತಿಯೊಂದು ಚುಚ್ಚುಮದ್ದಿನ ಸಂಗ್ರಹ, ಸಾಗಾಟ ಹಾಗೂ ಮೂಲ ಸೌಕರ್ಯ ವ್ಯವಸ್ಥೆಗೆಂದು $2-$3 ವ್ಯಯವಾಗುವ ಲೆಕ್ಕಾಚಾರ ಮಾಡಲಾಗಿದೆ.
ದೇಶದ ಪ್ರತಿಯೊಬ್ಬ ಪ್ರಜೆಗೂ ಕೋವಿಡ್-19 ಲಸಿಕೆ ದೊರಕುವಂತೆ ಮಾಡಲು ಸರ್ಕಾರ ಪ್ರಯತ್ನ ಮಾಡುತ್ತಿದೆ ಎಂದು ದೇಶವಾಸಿಗಳನ್ನು ಉದ್ದೇಶಿಸಿ ಮಾತನಾಡಿದ ತಮ್ಮ ಇತ್ತೀಚಿನ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದರು.
ಲಸಿಕೆಗಳ ಸಮರ್ಪಕ ವಿತರಣೆಗಾಗಿ ಸಕಲ ತಯಾರಿಗಳನ್ನೂ ಮಾಡಿಕೊಳ್ಳುತ್ತಿರುವ ಕೇಂದ್ರ ಸರ್ಕಾರ, ತಾಲ್ಲೂಕು ಮಟ್ಟದಲ್ಲಿ ತ್ವರಿತ ಸಂಗ್ರಹ ಹಾಗೂ ವಿತರಣೆಗೆಂದು ಅದಾಗಲೇ ದೇಶಾದ್ಯಂತ ಇರುವ ಶೀತ ಸಂಗ್ರಹಾಗಾರಗಳನ್ನು ಗುರುತು ಮಾಡಿಕೊಳ್ಳಲು ಮುಂದಾಗಿದೆ.