ಕಳೆದ 24 ಗಂಟೆಗಳಲ್ಲಿ ಭಾರತ 14,199 ಹೊಸ ಕೊರೊನಾ ಕೇಸ್ಗಳನ್ನ ದಾಖಲಿಸಿದೆ. ಈ ಮೂಲಕ ದೇಶದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 11 ಮಿಲಿಯನ್ಗೆ ಏರಿಕೆ ಕಂಡಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಈ ಮೂಲಕ ಸತತ ಐದನೇ ದಿನವೂ ಭಾರತ ಕೊರೊನಾ ಪ್ರಕರಣದಲ್ಲಿ ಏರಿಕೆ ಕಾಣುತ್ತಲೇ ಇದೆ.
ಇನ್ನು ಕೊರೊನಾದಿಂದ ಕಳೆದ 24 ಗಂಟೆಗಳಲ್ಲಿ 83 ಮಂದಿ ಸಾವಿಗೀಡಾಗಿದ್ದು ಈ ಮೂಲಕ ದೇಶದಲ್ಲಿ ಡೆಡ್ಲಿ ವೈರಸ್ನಿಂದ ಬಲಿಯಾದವರ ಸಂಖ್ಯೆ 1,56,385ರಷ್ಟಾಗಿದೆ. ದೇಶದಲ್ಲಿ ಗುಣಮುಖರಾದವರ ಪ್ರಮಾಣ 97.22 ಪ್ರತಿಶತದಷ್ಟಿದೆ. ಅಂದರೆ ಈವರೆಗೆ ಒಟ್ಟು 1,06,99,410 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ.
ಆದರೆ ದೇಶದಲ್ಲಿ ಕಳೆದ 5 ದಿನಗಳಿಂದ ಕೊರೊನಾ ಪ್ರಕರಣದಲ್ಲಿ ಏರಿಕೆ ಕಾಣುತ್ತಲೇ ಇರೋದು ಆತಂಕಕ್ಕೆ ಕಾರಣವಾಗಿದೆ. ಕಳೆದ 5 ವಾರಗಳಲ್ಲಿ ಇದೇ ಮೊದಲ ಬಾರಿಗೆ ಈ ರೀತಿ ನಿರಂತರ ಏರಿಕೆ ಕಂಡಿದೆ. ಫೆಬ್ರವರಿ 21ರವರೆಗೆ ಅಂದರೆ ವಾರಾಂತ್ಯದಲ್ಲಿ 1,00,990 ಪ್ರಕರಣ ದಾಖಲಾಗಿತ್ತು. ಆದರೆ ವಾರದ ಆರಂಭದಲ್ಲೇ ದೇಶ 77,284 ಹೊಸ ಕೇಸ್ಗಳನ್ನು ದಾಖಲಿಸಿದೆ. ಅಂದರೆ ಕಳೆದ ವಾರಕ್ಕೆ ಹೋಲಿಸಿದ್ರೆ ಕೊರೊನಾ ಸೋಂಕಿನ ಪ್ರಮಾಣ 31 ಪ್ರತಿಶತದಷ್ಟು ಏರಿಕೆ ಕಂಡಿದೆ.
ಮಹಾರಾಷ್ಟ್ರದಲ್ಲಂತೂ ಕೋವಿಡ್ ಪ್ರಕರಣ ಏರಿಕೆ ಕಾಣುತ್ತಲೇ ಇದೆ. ಮಹಾರಾಷ್ಟ್ರದಲ್ಲಿ 6971 ಹೊಸ ಕೊರೊನಾ ಕೇಸ್ ಹಾಗೂ 24 ಗಂಟೆಗಳಲ್ಲಿ 35 ಸಾವುಗಳು ವರದಿಯಾಗಿದೆ. ಕಳೆದ 121 ದಿನಗಳಲ್ಲಿ ಇದು ದಾಖಲೆಯ ವರದಿಯಾಗಿದೆ. ಪುಣೆ ಜಿಲ್ಲೆಯೊಂದರಲ್ಲೇ ಕಳೆದ 24 ಗಂಟೆಗಳಲ್ಲಿ 1176 ಹೊಸ ಕೇಸ್ ಹಾಗೂ 6 ಸಾವುಗಳನ್ನ ದಾಖಲಿಸಿದೆ. ಕೊರೊನಾ ಕೇಸ್ ಹೆಚ್ಚುತ್ತಿರುವ ಹಿನ್ನೆಲೆ ಜಿಲ್ಲಾಡಳಿತ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನ ಬಂದ್ ಮಾಡುವಂತೆ ಆದೇಶ ಹೊರಡಿಸಿದೆ.
ಕೇರಳದಲ್ಲೂ ಕೂಡ ಕೊರೊನಾ ಕೇಸ್ನಲ್ಲಿ ಗಣನೀಯ ಪ್ರಮಾಣದ ಏರಿಕೆ ವರದಿಯಾಗ್ತಿದೆ. ಕಳೆದ 24 ಗಂಟೆಗಳಲ್ಲಿ 4070 ಹೊಸ ಕೊರೊನಾ ಕೇಸ್ಗಳು ದಾಖಲಾಗಿದೆ. ದೆಹಲಿಯಲ್ಲಿ 24 ಗಂಟೆಗಳಲ್ಲಿ 145 ಹೊಸ ಕೊರೊನಾ ಕೇಸ್ಗಳು ವರದಿಯಾಗಿದ್ದು ಈ ಮೂಲಕ ಸೋಂಕು ನಿಯಂತ್ರಣದಲ್ಲಿದೆ ಎಂದು ಅಂದಾಜಿಸಬಹುದಾಗಿದೆ.