ಭಾರತದಲ್ಲೀಗ ಚಳಿಗಾಲ, ಮಳೆಗಾಲ, ಬೇಸಿಗೆಕಾಲ ಮಾತ್ರವಲ್ಲದೆ ಮಾಲಿನ್ಯದ ಕಾಲವೂ ಸೇರ್ಪಡೆಗೊಂಡಿದೆ. ಸಾಲದ್ದಕ್ಕೆ ಮಾಲಿನ್ಯಕಾಲವು ಸದಾಕಾಲ ಬಾಧಿಸುತ್ತಿದೆ. ಎಲ್ಲ ಕಾಲದಲ್ಲೂ ಕಾಡುತ್ತಿರುವ ಮಾಲಿನ್ಯ ಕಾಲದಿಂದಾಗಿ ಮನುಷ್ಯನ ಆಯುಷ್ಯ ಎಷ್ಟು ಕಡಿಮೆಯಾಗುತ್ತಿದೆ ಗೊತ್ತೇ ?
ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್ಒ) ಯ ಮಾರ್ಗಸೂಚಿ ಮೀರಿದ ಮಾಲಿನ್ಯವಿದ್ದು, ಭಾರತೀಯ ಹವಾಗುಣಮಟ್ಟ ಮೌಲ್ಯಮಾಪನದ ಪ್ರಕಾರ ಶೇ.84 ರಷ್ಟು ಭಾರತೀಯರು ಬದುಕುತ್ತಿರುವ ಪ್ರದೇಶಗಳು ಕಲುಷಿತಗೊಂಡಿವೆ.
ಚಿಕಾಗೋ ವಿಶ್ವವಿದ್ಯಾಲಯದ ಇಂಧನ ನೀತಿ ಸಂಸ್ಥೆ ಅಧ್ಯಯನದ ಪ್ರಕಾರ, ಮಾಲಿನ್ಯದಿಂದಾಗಿ ಭಾರತೀಯರ ಸರಾಸರಿ ಆಯುಷ್ಯದಲ್ಲಿ 5.2 ವರ್ಷ ಕಡಿತಗೊಳ್ಳುತ್ತಿದೆ.
ಉತ್ತರ ಪ್ರದೇಶ ರಾಜಧಾನಿ ಲಕ್ನೋದಲ್ಲಿ ಡಬ್ಲ್ಯುಎಚ್ಒ ಮಾರ್ಗಸೂಚಿಗಿಂತ 11 ಪಟ್ಟು ಮಾಲಿನ್ಯ ಹೆಚ್ಚಿದೆ. ಇಲ್ಲಿನ ನಿವಾಸಿಗಳ ಆಯುಷ್ಯದಲ್ಲಿ ಸರಾಸರಿ 10.3 ವರ್ಷದಷ್ಟು ಕಡಿಮೆಯಾಗುತ್ತಿದೆ. ಅಲ್ಲದೆ, ದಿಲ್ಲಿ ಮತ್ತು ಕೊಲ್ಕತ್ತಾ ಕೂಡ ಇದೇ ಹಾದಿಯಲ್ಲಿದ್ದು, ಏಳೆಂಟು ವರ್ಷ ಆಯುಷ್ಯ ಕ್ಷೀಣವಾಗುತ್ತಿದೆ. ಕೊರೋನಾ ನೆಪದಲ್ಲಾದರೂ ಮಾಸ್ಕ್ ಧರಿಸುವುದು ಒಳಿತು ಎಂದು ತಜ್ಞರು ಸಲಹೆ ನೀಡಿದ್ದಾರೆ.