ಮಾರಣಾಂತಿಕ ಮಹಾಮಾರಿ ಕೊರೊನಾಗೆ ಲಸಿಕೆ ಕಂಡುಹಿಡಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ರಷ್ಯಾ ಪಾತ್ರವಾಗಿದೆ. ಲಸಿಕೆಯ ಮೊದಲ ಪ್ರಯೋಗವನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಪುತ್ರಿ ಮರಿಯಾ ಪುಟಿನ್ ಅವರ ಮೇಲೆ ಪ್ರಯೋಗಿಸಲಾಗಿದೆ. ಹೀಗಾಗಿ ವಿಶ್ವದ ಎಲ್ಲಾ ರಾಷ್ಟ್ರಗಳು ಈಗ ರಷ್ಯಾದತ್ತ ಕುತೂಹಲದಿಂದ ನೋಡುತ್ತಿದ್ದು, ಇಪ್ಪತ್ತಕ್ಕೂ ಅಧಿಕ ರಾಷ್ಟ್ರಗಳು ಈ ಲಸಿಕೆಗೆ ಈಗಾಗಲೇ ಬೇಡಿಕೆ ಸಲ್ಲಿಸಿವೆ ಎಂದು ಹೇಳಲಾಗಿದೆ.
ಸ್ಪುಟ್ನಿಕ್ V ಹೆಸರಿನ ಈ ಲಸಿಕೆಯನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಲು ರಷ್ಯಾ ಸಿದ್ಧತೆ ನಡೆಸಿದ್ದು, ವಿವಿಧ ರಾಷ್ಟ್ರಗಳಲ್ಲಿ ಇದರ ಪ್ರಯೋಗವನ್ನು ಸಹ ಮಾಡಲಿದೆ. ಈ ವರ್ಷಾಂತ್ಯಕ್ಕೆ ರಷ್ಯಾ 30 ಮಿಲಿಯನ್ ಲಸಿಕೆಗಳನ್ನು ಸಿದ್ಧಪಡಿಸಲಿದೆ ಎನ್ನಲಾಗಿದ್ದು, ಭಾರತ ಸೇರಿದಂತೆ ಯುನೈಟೆಡ್ ಅರಬ್ ಎಮಿರೇಟ್ಸ್, ಸೌದಿ ಅರೇಬಿಯಾ, ಇಂಡೋನೇಷ್ಯಾ ಫಿಲಿಫೈನ್ಸ್, ಬ್ರೆಜಿಲ್, ಮೆಕ್ಸಿಕೋ ಮೊದಲಾದ ರಾಷ್ಟ್ರಗಳು ಲಸಿಕೆಗೆ ಬೇಡಿಕೆ ಸಲ್ಲಿಸಿವೆ ಎನ್ನಲಾಗಿದೆ.
ಬಾಹ್ಯಾಕಾಶಕ್ಕೆ ಮೊದಲ ಕೃತಕ ಉಪಗ್ರಹವನ್ನು 1957 ರಲ್ಲಿ ಕಳುಹಿಸಿದ್ದ ರಷ್ಯಾ ಅದಕ್ಕೆ ಸ್ಪುಟ್ನಿಕ್ ಎಂದು ಹೆಸರಿಸಿತ್ತು. ಇದೀಗ ವಿಶ್ವದ ಮೊದಲ ಕೊರೊನಾ ಲಸಿಕೆಗೆ ಸ್ಪುಟ್ನಿಕ್ V ಎಂದು ಹೆಸರಿಡಲಾಗಿದೆ. ಇದರ ಮಧ್ಯೆ ವಿಶ್ವ ಆರೋಗ್ಯ ಸಂಸ್ಥೆ, ರಷ್ಯಾದ ಕೊರೊನಾ ಲಸಿಕೆ ಕುರಿತು ಅನುಮಾನ ವ್ಯಕ್ತಪಡಿಸಿದ್ದು, ಇದು ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದುನೋಡಬೇಕಿದೆ.