ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ಗೆ ವಾಯು ಯಾನದ ವೇಳೆ ಭಾರತದ ವಾಯು ಪ್ರದೇಶವನ್ನ ಬಳಕೆ ಮಾಡಿಕೊಳ್ಳಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.
ಇಂದು ಇಮ್ರಾನ್ ಖಾನ್ ಶ್ರೀಲಂಕಾಗೆ ಪ್ರವಾಸ ಕೈಗೊಂಡಿದ್ದು ಇದಕ್ಕಾಗಿ ಭಾರತದ ವಾಯು ಪ್ರದೇಶವನ್ನ ಬಳಕೆ ಮಾಡಿಕೊಂಡಿದ್ದಾರೆ.
2019ರಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿಗೆ ಪಾಕಿಸ್ತಾನದ ವಾಯು ಪ್ರದೇಶವನ್ನ ಬಳಕೆ ಮಾಡಿಕೊಳ್ಳಲು ಇಮ್ರಾನ್ ಖಾನ್ ಸರ್ಕಾರ ನಿರ್ಬಂಧ ಹೇರಿತ್ತು.
ಅಲ್ಲದೇ ಇದಕ್ಕೆ ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಎಂಬ ನೆಪವನ್ನೊಡ್ಡಿತ್ತು. ಪ್ರಧಾನಿ ಮೋದಿ ಅಮೆರಿಕ ಹಾಗೂ ಸೌದಿ ಅರೆಬಿಯಾಗೆ ಪ್ರವಾಸ ಕೈಗೊಂಡಿದ್ದ ವೇಳೆ ಪಾಕ್ ಸರ್ಕಾರ ಈ ನಿರ್ಧಾರ ಪ್ರಕಟಿಸಿತ್ತು.
ವಿವಿಐಪಿ ವಿಮಾನಕ್ಕೆ ವಾಯು ಪ್ರದೇಶ ನೀಡಲು ನಿರಾಕರಿಸಿದ ಪಾಕಿಸ್ತಾನ ಸರ್ಕಾರದ ಕ್ರಮವನ್ನ ಭಾರತ ನಾಗರಿಕ ವಿಮಾನಯಾನ ಸಂಸ್ಥೆಯ ಗಮನಕ್ಕೆ ತಂದಿತ್ತು. ಎಲ್ಲಾ ದೇಶಗಳಲ್ಲೂ ವಿವಿಐಪಿ ವಾಹನಗಳ ಹಾರಾಟಕ್ಕೆ ವಾಯು ಪ್ರದೇಶವನ್ನ ಬಿಟ್ಟುಕೊಡಲಾಗುತ್ತೆ. ಆದರೆ ಪಾಕಿಸ್ತಾನ ಮಾತ್ರ ಇಂತಹ ಒಂದು ವಿಚಿತ್ರ ನಿರ್ಧಾರವನ್ನ ಕೈಗೊಂಡಿತ್ತು.