ತಿರುವನಂತಪುರಂ: ದೇಶದಲ್ಲೇ ಮೊದಲ ಬಾರಿಗೆ ಕೇರಳದಲ್ಲಿ ಸರ್ಕಾರದ ವತಿಯಿಂದಲೇ ತರಕಾರಿಗಳ ಮೂಲ ಬೆಲೆ ನಿಗದಿ ಮಾಡಲಾಗಿದೆ.
ಆರಂಭಿಕ ಹಂತದಲ್ಲಿ ಕೇರಳದಲ್ಲಿ ಉತ್ಪಾದನೆಯಾಗುವ 16 ರೀತಿಯ ತರಕಾರಿಗಳ ಮೂಲ ದರವನ್ನು ಕೇರಳ ಸರ್ಕಾರ ನಿಗದಿ ಮಾಡಿದ್ದು, ಈ ಮೂಲಕ ದೇಶದಲ್ಲೇ ಮೊದಲ ಬಾರಿಗೆ ತರಕಾರಿಗೆ ಮೂಲಬೆಲೆ ನಿಗದಿ ಮಾಡಿದ ಮೊದಲ ರಾಜ್ಯ ಎನ್ನುವ ಹೆಗ್ಗಳಿಕೆಗೆ ಕೇರಳ ಪಾತ್ರವಾಗಿದೆ.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಕುರಿತು ಮಾಹಿತಿ ನೀಡಿದ್ದು, ತರಕಾರಿ ಮೂಲ ಬೆಲೆ ಉತ್ಪಾದನೆಗಿಂತ ಶೇಕಡ 20 ರಷ್ಟು ಹೆಚ್ಚಿನ ಮೊತ್ತವನ್ನು ಸರ್ಕಾರ ನಿಗದಿ ಮಾಡಲಿದೆ. ರೈತರಿಗೆ ಇದರಿಂದ ಅನುಕೂಲವಾಗುತ್ತದೆ. ಇದೇ ನವೆಂಬರ್ 1 ರಿಂದ ಹೊಸ ಯೋಜನೆ ಜಾರಿಗೆ ಬರಲಿದೆ ಎಂದು ಅವರು ಹೇಳಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ತರಕಾರಿ ಉತ್ಪಾದನೆ ಎರಡುಪಟ್ಟು ಹೆಚ್ಚಾಗಿದೆ. ಮಾರುಕಟ್ಟೆಯಲ್ಲಿ ತರಕಾರಿಗೆ ಮೂಲ ದರಕ್ಕಿಂತ ಕಡಿಮೆ ಬೆಲೆ ಇದ್ದಾಗ ಮೂಲ ದರದಲ್ಲಿ ರೈತರಿಂದ ಸರ್ಕಾರ ತರಕಾರಿಯನ್ನು ಖರೀದಿಸಲಿದೆ. ಗುಣಮಟ್ಟವನ್ನು ಆಧರಿಸಿ ಬೆಲೆ ನಿಗದಿ ಮಾಡಲಾಗುವುದು. ಸ್ಥಳೀಯ ಸಂಸ್ಥೆಗಳು ಯೋಜನೆಯಲ್ಲಿ ಭಾಗಿಯಾಗಲಿವೆ. ಯೋಜನೆಯ ಲಾಭ ಪಡೆಯುವ ರೈತರು ಸರ್ಕಾರದ ಪೋರ್ಟಲ್ ನಲ್ಲಿ ನೋಂದಣಿ ಮಾಡಿಕೊಳ್ಳಬೇಕಿದೆ ಎಂದು ಮಾಹಿತಿ ನೀಡಿದ್ದಾರೆ. ಮೊದಲ ಹಂತದಲ್ಲಿ ಬೀನ್ಸ್, ಬೀಟ್ರೂಟ್, ಸೌತೆಕಾಯಿ, ಸೋರೆಕಾಯಿ, ಟೊಮೇಟೊ, ಆಲೂಗಡ್ಡೆ, ಬಾಳೆಹಣ್ಣು, ವಯನಾಡ್ ಬಾಳೆಹಣ್ಣು ಹಾಗೂ ತರಕಾರಿಗಳಿಗೆ ಮೂಲಬೆಲೆ ನಿಗದಿ ಮಾಡಲಾಗಿದೆ.