ಇಡೀ ವಿಶ್ವಕ್ಕೆ ಕೊರೊನಾ ವೈರಸ್ ದೊಡ್ಡ ಸವಾಲಾಗಿ ಪರಿಣಮಿಸಿದೆ. ಕೊರೊನಾ ಇಡೀ ವಿಶ್ವದ ಚಿತ್ರಣವನ್ನೇ ಬದಲಿಸಿದೆ. ಕೊರೊನಾ ಕಾರಣಕ್ಕೆ ಜನವರಿಯಲ್ಲಿಯೇ ಕೆಲ ದೇಶಗಳು ಲಾಕ್ ಡೌನ್ ಘೋಷಣೆ ಮಾಡಿದ್ದವು. ಭಾರತ ಮಾರ್ಚ್ 24ರ ರಾತ್ರಿಯಿಂದ ಲಾಕ್ ಡೌನ್ ಘೋಷಣೆ ಮಾಡಿತ್ತು.
ದೇಶ ಅನ್ಲಾಕ್ ಆದ್ಮೇಲೂ ಜನರು ಮನೆಯಿಂದ ಹೊರಗೆ ಬರಲು ಹೆದರುತ್ತಿದ್ದಾರೆ. ಕೊರೊನಾ ಸೋಂಕು ಹೆಚ್ಚಾಗುತ್ತಲೇ ಇದೆ. ಇದೇ ಕಾರಣಕ್ಕೆ ಜನರು ಮನೆಯಿಂದಲೇ ಕೆಲಸ ಮಾಡ್ತಿದ್ದಾರೆ. ವರ್ಕ್ ಫ್ರಂ ಹೋಮ್ ನಿಂದಾಗಿ ಕೆಲಸದ ಅವಧಿ ಹೆಚ್ಚಾಗಿದೆ. ಅನೇಕರು ಕೆಲಸವಿಲ್ಲದೆ ಮನೆಯಲ್ಲಿದ್ದಾರೆ.
ಇದು ಜನರ ಚಿಂತೆ, ಖಿನ್ನತೆಗೆ ಕಾರಣವಾಗಿದೆ. ಹಿರಿಯರು ಒಂಟಿತನದ ಸಮಸ್ಯೆ ಎದುರಿಸುತ್ತಿದ್ದಾರೆ. ಲಾಕ್‌ಡೌನ್ ಕಾರಣ ಮನೆಯಲ್ಲಿರುವ ನಿರುದ್ಯೋಗಿಗಳು ಅನೇಕ ಗಂಭೀರ ಕಾಯಿಲೆಗಳಿಗೆ ಬಲಿಯಾಗಿದ್ದಾರೆ. ಗೂಗಲ್‌ನಲ್ಲಿ ಜನರು ಒತ್ತಡ ಮತ್ತು ಆತಂಕವನ್ನು ಹೋಗಲಾಡಿಸುವ ಪರಿಹಾರದ ಹುಡುಕಾಟ ನಡೆಸುತ್ತಿದ್ದಾರೆ.
ಒಂಟಿತನ ಹೋಗಲಾಡಿಸಲು ಗೂಗಲ್ ಸಹಾಯ ಕೇಳ್ತಿದ್ದಾರೆ. ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಇತ್ತೀಚೆಗೆ ನಡೆಸಿದ ಜಾಗತಿಕ ಆರೋಗ್ಯ ಸಮೀಕ್ಷೆಯು ಆಘಾತಕಾರಿ ಅಂಕಿ ಅಂಶಗಳನ್ನು ಬಹಿರಂಗಪಡಿಸಿದೆ. ಕೊರೊನಾ ಸಮಯದಲ್ಲಿ ವಿಶ್ವದ ಶೇಕಡಾ 17 ಕ್ಕಿಂತ ಹೆಚ್ಚು ಜನರು ಖಿನ್ನತೆ ಮತ್ತು ಆತಂಕದಿಂದ ಬಳಲುತ್ತಿದ್ದಾರೆ ಎಂಬುದು ತಿಳಿದು ಬಂದಿದೆ. ಪ್ರತಿ ಇಬ್ಬರು ಯುವಕರಲ್ಲಿ ಒಬ್ಬರು ಖಿನ್ನತೆ ಮತ್ತು ಒತ್ತಡಕ್ಕೆ ಬಲಿಯಾಗುತ್ತಾರೆ. ಆನ್ಲೈನ್ ಕ್ಲಾಸುಗಳು ಕೂಡ ವಿದ್ಯಾರ್ಥಿಗಳನ್ನು ಖಿನ್ನತೆಗೆ ನೂಕಿವೆ. ಶೇಕಡಾ 50ರಷ್ಟು ವಿದ್ಯಾರ್ಥಿಗಳು ವಿಳಂಬ ಶಿಕ್ಷಣದ ಭಯಕ್ಕೊಳಗಾಗಿದ್ದಾರೆ.