ಒಂದೇ ತಾಸಿನಲ್ಲಿ ಕೊರೊನಾ ವೈರಸ್ ಪರೀಕ್ಷಾ ವರದಿ ನೀಡಬಲ್ಲ ಅತಿ ಕಡಿಮೆ ವೆಚ್ಚದ ಸಾಧನವನ್ನು ಖರಗ್ಪುರ ಐಐಟಿ ತಜ್ಞರು ಕಂಡು ಹಿಡಿದಿದ್ದಾರೆ.
ಗಂಟಲ ದ್ರವದ ಮಾದರಿ ನೀಡುವ ವ್ಯಕ್ತಿಯ ಮೊಬೈಲ್ ಗೆ ಒಂದು ತಾಸಿನಲ್ಲಿ ನೇರವಾಗಿ ಪಾಸಿಟಿವ್ ಅಥವಾ ನೆಗೆಟಿವ್ ವರದಿ ಕಳಿಸುವ ವ್ಯವಸ್ಥೆ ಇದರಲ್ಲಿದೆ. ಅಲ್ಲದೆ, ಸದ್ಯ ಚಾಲ್ತಿಯಲ್ಲಿರುವ ಆರ್ ಟಿ- ಪಿಸಿಆರ್ ಯಂತ್ರಕ್ಕೆ ಸರಿ ಮಿಗಿಲಾಗಿ ನಿರ್ದಿಷ್ಟ ವರದಿ ನೀಡಲಿದೆ.
ಒಂದು ಸಾಧನದಿಂದ ಸಾಕಷ್ಟು ಮಾದರಿ ಪರೀಕ್ಷೆ ಮಾಡಬಹುದಾಗಿದ್ದು, ಒಂದು ಪೇಪರ್ ಮಾತ್ರ ಬದಲಿಸಬೇಕಿದೆ. ಪ್ರತಿ ಮಾದರಿ ಪರೀಕ್ಷೆಗೆ ಸುಮಾರು 400 ರೂ. ವೆಚ್ಚವಾಗಲಿದೆ. ತಂತ್ರಜ್ಞಾನ ಸಂಪೂರ್ಣವಾಗಿ ಒಂದು ಸಣ್ಣ ಪೇಪರ್ ಮೇಲೆ ಕೇಂದ್ರೀಕೃತವಾಗಿದೆ. ಪ್ರತಿ ಪರೀಕ್ಷೆಯ ನಂತರ ಪೇಪರ್ ಬದಲಿಸಬೇಕಿದೆ.
ನೋವೆಲ್ ಟೆಕ್ನಾಲಜಿ ಫಾರ್ ಕೋವಿಡ್ – 19 ಎಂಬ ಹೆಸರಿನ ಈ ಸಾಧನವನ್ನು ಕಂಡು ಹಿಡಿಯಲು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಖರಗ್ಪುರದ ಬಯೋ ಸೈನ್ಸ್ ನ ಪ್ರಾಧ್ಯಾಪಕ ಸುಮನ್ ಚಕ್ರವರ್ತಿ ಮೂಲ ಯೋಜನಾಕರ್ತರು. ಸುಜಯ್ ಕುಮಾರ್ ಬಿಸ್ವಾಸ್ ಸಾಧನವನ್ನು ನಿರ್ಮಿಸಿದ್ದಾರೆ. ಸಪ್ತರಿಷಿ ಬ್ಯಾನರ್ಜಿ, ನಂದಿತಾ ಕೆಡಿಯಾ ಹಾಗೂ ಡಾ. ಆದಿತ್ಯ ಬಂಡೋಪಾಧ್ಯಾಯ ಜೀವ ವೈಜ್ಞಾನಿಕ ವಿಶ್ಲೇಷಣೆಯ ಶಿಷ್ಟಾಚಾರವನ್ನು ಸಿದ್ಧಮಾಡಿ ಸಾಧನದಲ್ಲಿ ಅಳವಡಿಸುವಲ್ಲಿ ಸಹಕಾರ ನೀಡಿದ್ದಾರೆ.
ಸಾಧನದ ಮೊತ್ತ ಕೇವಲ 2 ಸಾವಿರ ರೂ.ಗಳಾಗಿವೆ. ಸದ್ಯ ಬಳಸುತ್ತಿರುವ ಆರ್ ಟಿ – ಪಿಸಿಆರ್ ಯಂತ್ರ 15 ಲಕ್ಷ ಬೆಲೆಬಾಳುತ್ತದೆ. ಹೊಸ ಸಾಧನ ಕೇವಲ ಕೋವಿಡ್ ಮಾತ್ರವಲ್ಲ, ಆ ಮಾದರಿಯ ಎಲ್ಲ ವೈರಸ್ ಗಳ ಪರೀಕ್ಷೆಗೂ ಲಭ್ಯವಾಗಲಿದೆ ಎಂದು ಬಯೋ ಸೈನ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಅರಿಂದಂ ಮಂಡಲ್ ತಿಳಿಸಿದ್ದಾರೆ.