ಬುದ್ಧಿವಂತಿಕೆ ಸರಿಯಾದ ಹಾದಿಯಲ್ಲಿ ಬಳಕೆಯಾಗಬೇಕು ಇಲ್ಲವಾದರೆ ಒಂದು ದಿನ ಸರಿಯಾದ ಬೆಲೆ ತೆರಬೇಕಾಗುತ್ತದೆ ಎಂಬುದಕ್ಕೆ ಇಲ್ಲೊಂದು ಉದಾಹರಣೆ ಇದೆ.
ಐಐಟಿ ಹಳೆಯ ವಿದ್ಯಾರ್ಥಿಯೊಬ್ಬ ರೈಲ್ವೆ ಇಲಾಖೆಯ ತತ್ಕಾಲ್ ಟಿಕೆಟ್ ಗಳನ್ನು ಅಡ್ಡದಾರಿಯಲ್ಲಿ ಬುಕಿಂಗ್ ಮಾಡಿ ಅಕ್ರಮವಾಗಿ 20 ಲಕ್ಷ ರೂ. ಸಂಗ್ರಹಿಸಿದ ಪ್ರಕರಣ ಬಯಲಾಗಿದೆ.
ತಮಿಳುನಾಡಿನ ಯುವರಾಜ ಎಂಬಾತ ಸೂಪರ್ ತತ್ಕಾಲ್ ಮತ್ತು ಸೂಪರ್ ತತ್ಕಾಲ್ ಪ್ರೊ ಎಂಬ ಎರಡು ಅ್ಯಪ್‌ಗಳನ್ನು ವಿನ್ಯಾಸಗೊಳಿಸಿ, ಆ ಮೂಲಕ ಐಆರ್‌ಸಿಟಿಸಿ ವ್ಯವಸ್ಥೆಯನ್ನು ಬೈಪಾಸ್ ಮಾಡಿ ರೈಲ್ವೆ ತತ್ಕಾಲ್ ಟಿಕೆಟ್ ಗಳನ್ನು ಮಾಡಿಕೊಡುತ್ತಿದ್ದ.
ಐಐಟಿ ಹಳೆಯ ವಿದ್ಯಾರ್ಥಿಯಾದ ಈತ ಕಳೆದ ನಾಲ್ಕು ವರ್ಷದಲ್ಲಿ ಈ ರೀತಿ ಟಿಕೆಟ್ ಬುಕಿಂಗ್ ಮಾಡುವ ಮೂಲಕ 20 ಲಕ್ಷ ರೂಪಾಯಿ ಸಂಗ್ರಹಿಸಿದ್ದ ಎಂಬುದು ತನಿಖೆಯಿಂದ ಗೊತ್ತಾಗಿದೆ. ಇವನ ಅಪ್ಲಿಕೇಶನ್ ಮೂಲಕ ಒಂದು ಲಕ್ಷ ಗ್ರಾಹಕ ಇದ್ದರು ಎಂಬುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಸದ್ಯ ಆತನನ್ನು ಬಂಧಿಸಲಾಗಿದೆ.
ಅಣ್ಣ ವಿಶ್ವವಿದ್ಯಾಲಯದಲ್ಲಿ ಏರೋನಾಟಿಕಲ್ ಬಿಇ ಪದವಿ ಬಳಿಕ ಖರಗ್‌ಪುರ ಐಐಟಿಯಿಂದ ಏರೋಸ್ಪೇಸ್ ಎಂಟೆಕ್ ಮಾಡಿದ್ದ ಯುವರಾಜ, ತನ್ನ ಬುದ್ಧಿವಂತಿಕೆಯನ್ನು ಅಪರಾಧ ಚಟುವಟಿಕೆಯಲ್ಲಿ ಬಳಸಿಕೊಂಡಿದ್ದು ವಿಲಕ್ಷಣವೇ ಸರಿ. ಇದೀಗ ಆತ ಸಿದ್ಧಪಡಿಸಿದ್ದ ಆ್ಯಪ್ ಗಳನ್ನು ಪ್ಲೇಸ್ಟೋರ್ ಮತ್ತು ಬ್ರೌಸರ್ ಗಳಿಂದ ತೆಗೆದುಹಾಕಲಾಗಿದೆ.