ಕೊರೊನಾ ವೈರಸ್ ಎರಡನೇ ಅಲೆ ಇನ್ನೂ ಅತಿರೇಕಕ್ಕೆ ಹೋಗಿಲ್ಲ. ಈ ಮಧ್ಯೆ ಮೂರನೇ ಅಲೆ ಬಗ್ಗೆ ಮಾತನಾಡಲಾಗ್ತಿದೆ. ಭಾರತದಲ್ಲಿ ಮೂರನೇ ಅಲೆ ತಡೆಯಲು ಸಾಧ್ಯವಿಲ್ಲವೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಕೊರೊನಾ ವೈರಸ್ ಅಪಾಯ ತಡೆಯುವ ಉಪಾಯವೆಂದ್ರೆ ವ್ಯಾಕ್ಸಿನೇಷನ್.
18 ವರ್ಷ ಮೇಲ್ಪಟ್ಟವರಿಗೂ ಕೊರೊನಾ ಲಸಿಕೆ ಹಾಕಲಾಗ್ತಿದೆ. ಕೊರೊನಾ ಲಸಿಕೆ ಹಾಕಿಸಿಕೊಳ್ಳುವ ಮೊದಲು ಕೆಲವೊಂದು ವಿಷ್ಯವನ್ನು ತಿಳಿದಿರಬೇಕಾಗುತ್ತದೆ. ಕೊರೊನಾ ಸೋಂಕಿಗೆ ಒಳಗಾದವರು ತಕ್ಷಣ ಲಸಿಕೆ ಹಾಕಿಸಿಕೊಳ್ಳುವುದು ಸೂಕ್ತವಲ್ಲ. ಲಸಿಕೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಒಮ್ಮೆ ಕೊರೊನಾ ಬಂದ ನಂತ್ರ ಮತ್ತೆ ಕೊರೊನಾ ಬರುವುದಿಲ್ಲ ಎನ್ನಲು ಸಾಧ್ಯವಿಲ್ಲ. ಆದ್ರೆ ಲಸಿಕೆ ಹಾಕಿದ ನಂತ್ರ ಕೊರೊನಾದ ಸೌಮ್ಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ಕೊರೊನಾ ಲಸಿಕೆ ಹಾಕಿಸಿಕೊಳ್ಳುವುದು ಒಳ್ಳೆಯದು.
ನಡೆಸಿದ ಅಧ್ಯಯನಗಳ ಪ್ರಕಾರ, ಒಬ್ಬ ವ್ಯಕ್ತಿಯು ಕೋವಿಡ್ -19 ಸೋಂಕಿನಿಂದ ಹೊರ ಬರುತ್ತಿದ್ದಂತೆ ಅವನ ದೇಹದಲ್ಲಿ ನೈಸರ್ಗಿಕ ರೋಗ ನಿರೋಧಕ ಶಕ್ತಿ ಹುಟ್ಟಿಕೊಳ್ಳುತ್ತದೆ. ಅದು 90 ರಿಂದ 180 ದಿನಗಳವರೆಗೆ ಇರುತ್ತದೆ. ನೈಸರ್ಗಿಕ ರೋಗ ನಿರೋಧಕ ಶಕ್ತಿ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆಯಾದರೂ, ಇದು ಸೋಂಕಿನ ಪ್ರಮಾಣವನ್ನೂ ಅವಲಂಬಿಸಿರುತ್ತದೆ. ಕೋವಿಡ್ ಸೋಂಕಿತ ರೋಗಿಗಳು ಲಸಿಕೆ ತೆಗೆದುಕೊಳ್ಳಬೇಕು. ಆದರೆ ಸಂಪೂರ್ಣವಾಗಿ ಚೇತರಿಸಿಕೊಂಡ 2 ರಿಂದ 4 ವಾರಗಳ ನಂತರ ಲಸಿಕೆ ತೆಗೆದುಕೊಳ್ಳಬೇಕು.
ವೈರಸ್ ವಿರುದ್ಧ ಹೋರಾಡಲು ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಉತ್ಪತ್ತಿಯಾಗಿರುತ್ತದೆ. ಆಗ ಕೊರೊನಾ ಲಸಿಕೆ ಹಾಕಿದಲ್ಲಿ ಹೆಚ್ಚು ಪ್ರಯೋಜನಕಾರಿಯಾಗಿರುವುದಿಲ್ಲ. ಹಾಗಾಗಿ ನೈಸರ್ಗಿಕ ರೋಗ ನಿರೋಧಕ ಶಕ್ತಿ ದುರ್ಬಲವಾದ ಮೇಲೆ ಲಸಿಕೆ ಹಾಕಿಸಿಕೊಳ್ಳಬೇಕು. ಒಂದು ವೇಳೆ ಒಂದು ಡೋಸ್ ನಂತ್ರ ಕೊರೊನಾ ಸೋಂಕು ಕಾಣಿಸಿಕೊಂಡರೆ ಚೇತರಿಸಿಕೊಂಡ 2 ವಾರಗಳ ನಂತ್ರ ಎರಡನೇ ಡೋಸ್ ಹಾಕಿಸಿಕೊಳ್ಳಬೇಕು.