ನವದೆಹಲಿ: ದೇಶದಲ್ಲಿ ಮಾತ್ರವಲ್ಲದೇ ವಿಶ್ವದೆಲ್ಲೆಡೆ ಕೊರೊನಾ ಸೋಂಕು ತೀವ್ರ ಆತಂಕ ಮೂಡಿಸಿದ ಹಿನ್ನೆಲೆಯಲ್ಲಿ ಸೋಂಕು ತಡೆಗೆ ಲಸಿಕೆ ಕಂಡು ಹಿಡಿಯುವ ಪ್ರಯತ್ನಗಳು ಮುಂದುವರೆದಿವೆ.
ಹಲವು ಔಷಧಗಳು ಕೊರೊನಾ ನಿಯಂತ್ರಿಸುವಲ್ಲಿ ಪರಿಣಾಮಕಾರಿಯಾಗಿವೆ ಎನ್ನಲಾಗಿದ್ದು, ಅವುಗಳ ಬಳಕೆಗೆ ಅವಕಾಶ ನೀಡಲಾಗಿದೆ. ಇದರ ಮುಂದುವರೆದ ಭಾಗವಾಗಿ ಆಗಸ್ಟ್ 15 ರಂದು ಭಾರತೀಯ ಕೊರೊನಾ ತಡೆ ಔಷಧಿ ಬಿಡುಗಡೆ ಮಾಡಲಾಗುವುದು ಎಂದು ಹೇಳಲಾಗಿದೆ
ಐಸಿಎಂಆರ್, ಭಾರತ್ ಬಯೋಟೆಕ್ ವತಿಯಿಂದ ಕೊರೋನಾಗೆ ಔಷಧ ಬಿಡುಗಡೆ ಮಾಡಲಾಗುವುದು. ಕೋವಿಡ್ -19 ವ್ಯಾಕ್ಸಿನ್ ಹೆಸರಿನ ಔಷಧವನ್ನು ಆಗಸ್ಟ್ 15ರಂದು ಬಿಡುಗಡೆ ಮಾಡಲಾಗುವುದು. ಐಸಿಎಂಆರ್ ಮಹಾನಿರ್ದೇಶಕ ಬಲರಾಮ್ ಭಾರ್ಗವ ನೀಡಿರುವ ಮಾಹಿತಿಯಂತೆ, ಆಗಸ್ಟ್ 15 ರೊಳಗೆ ಕೋವಿಡ್-19 ಲಸಿಕೆ ಬಿಡುಗಡೆ ಮಾಡುವ ಗುರಿ ಹೊಂದಲಾಗಿದೆ. ತ್ವರಿತಗತಿಯಲ್ಲಿ ಕ್ಲಿನಿಕ್ ಪ್ರಯೋಗಗಳನ್ನು ನಡೆಸಿ ಔಷಧ ಲಸಿಕೆ ಸಿದ್ಧಪಡಿಸಲಾಗಿದ್ದು ಶೀಘ್ರವೇ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಭಾರತ ಅಭಿವೃದ್ಧಿಪಡಿಸಿದ ಮೊದಲ ಸ್ಥಳೀಯ ಲಸಿಕೆ ಇದಾಗಿದ್ದು, ಸರ್ಕಾರದ ಉನ್ನತ ಮಟ್ಟದಲ್ಲಿ ಮೇಲ್ವಿಚಾರಣೆ ನಡೆಸುತ್ತಿರುವ ಪ್ರಮುಖ ಆದ್ಯತೆ ಯೋಜನೆಗಳಲ್ಲಿ ಒಂದಾಗಿದೆ. ಪುಣೆ ವೈರಾಲಜಿ ವಿಭಾಗ, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್, ಭಾರತ್ ಬಯೋಟೆಕ್ ಇಂಟರ್ ನ್ಯಾಷನಲ್ ಲಿಮಿಟೆಡ್ ಲಸಿಕೆಯ ಪೂರ್ವಭಾವಿ ಮತ್ತು ವೈದ್ಯಕೀಯ ಅಭಿವೃದ್ಧಿಗೆ ಜಂಟಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಲಾಗಿದೆ.