ನೆಲ್ಲೂರು, ಆಂಧ್ರಪ್ರದೇಶ: ಕೊರೋನಾ ಮಹಾಮಾರಿ ಅದೆಷ್ಟೋ ಮಂದಿಯ ಜೀವವನ್ನು ಕಿತ್ತುಕೊಂಡಿದ್ದಲ್ಲದೆ, ಜೀವನವನ್ನೂ ಕಿತ್ತುಕೊಂಡಿದೆ. ಆಂಧ್ರಪ್ರದೇಶದ ನೆಲ್ಲೂರಿನ ಶಿಕ್ಷಕರೊಬ್ಬರನ್ನು ಶಾಲೆಯಿಂದ ವಜಾಗೊಳಿಸಿದ ಹಿನ್ನೆಲೆಯಲ್ಲಿ ಜೀವನೋಪಾಯಕ್ಕಾಗಿ ಬಾಳೆಹಣ್ಣು ಮಾರಾಟ ಮಾಡುತ್ತಿದ್ದರು. ಈ ವಿಷಯ ತಿಳಿದ ಹಳೇ ವಿದ್ಯಾರ್ಥಿಗಳು ಮಾಡಿದ್ದೇನು ಗೊತ್ತಾ…?
ವೆಂಕಟಸುಬ್ಬಯ್ಯ ಎಂಬ ಶಿಕ್ಷಕರೊಬ್ಬರು 15 ವರ್ಷಗಳಿಂದ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುತ್ತಿದ್ದರು. ಆದರೆ, ಕೊರೋನಾ ಹಿನ್ನೆಲೆಯಲ್ಲಿ ಪಾಠ ಇಲ್ಲದಿದ್ದರಿಂದ ಶಾಲೆ ಆಡಳಿತ ಮಂಡಳಿ ಇವರ ಸಹಿತ ಶಿಕ್ಷಕರನ್ನು ಕೆಲಸದಿಂದ ವಜಾ ಮಾಡಿದೆ. ಮೊದಲೇ ಸಾಲ ಮಾಡಿಕೊಂಡಿದ್ದ ವೆಂಕಟಸುಬ್ಬಯ್ಯ ಮತ್ತೆ ಸಾಲ ಮಾಡಲಾಗದೆ ಬಾಳೆಹಣ್ಣು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು.
ವಿಷಯ ತಿಳಿದ ಸುಮಾರು 150ಕ್ಕೂ ಹೆಚ್ಚು ಹಳೇ ವಿದ್ಯಾರ್ಥಿಗಳು ಸಾರ್ವಜನಿಕರಿಂದ ಹಣ ಸಂಗ್ರಹ ಮಾಡಿದ್ದಾರೆ. ಬಳಿಕ ಈ ಮೊತ್ತ 86,300 ರೂಪಾಯಿ ಆಗಿದ್ದು, ತಮ್ಮ ನೆಚ್ಚಿನ ಶಿಕ್ಷಕರಿಗೆ ನೀಡಿದ್ದಾರೆ. ನಾನು ಮತ್ತೆ ಶಿಕ್ಷಕ ವೃತ್ತಿಗೆ ಮರಳುತ್ತೇನೆ ಎಂದು ಹೇಳಿಕೊಂಡಿದ್ದಾರೆ ವೆಂಕಟಸುಬ್ಬಯ್ಯ.