ಕೋವಿಡ್ ಸಾಂಕ್ರಮಿಕ ಹರಡುವಿಕೆ ತೀವ್ರಗತಿಯಲ್ಲಿರುವ ನಡುವೆಯೇ ಆರೋಗ್ಯ ಕಾರ್ಯಕರ್ತರ ಅವಶ್ಯಕತೆಯೂ ಹೆಚ್ಚಾಗಿದೆ. ಹಾಲಿ ಕರ್ತವ್ಯ ನಿರತರ ಮೇಲೆ ಒತ್ತಡ ಹೆಚ್ಚಾಗಿದೆ.
ಇಂತಹ ಸಂದರ್ಭದಲ್ಲಿ ಗುಜರಾತ್‌ನ ಸೂರತ್‌ನ ನ್ಯಾನ್ಸಿ ಆಯೆಜಾ ಮಿಸ್ತ್ರಿ ಎಂಬ ನರ್ಸ್ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದರೂ ಸಹ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವ ಕಾರ್ಯಕ್ಕೆ ಹಾಜರಾಗಿ ಗಮನ ಸೆಳೆದಿದ್ದಾರೆ.
ಅಷ್ಟೇ ಅಲ್ಲ, ಇದೀಗ ನಡೆಯುತ್ತಿರುವ ರಂಜಾನ್ ತಿಂಗಳಲ್ಲಿ ಅವರು ಉಪವಾಸವನ್ನೂ ಕೈಗೊಂಡಿದ್ದಾರೆ.
ʼಕೊರೊನಾʼ ಸಾಮಾನ್ಯ ಲಕ್ಷಣವಿರುವವರು ಮನೆಯಲ್ಲಿ ಮಾಡಿ ಈ ಕೆಲಸ
ಈಕೆ ಪ್ರತಿದಿನ ಎಂಟರಿಂದ ಹತ್ತು ಗಂಟೆ ಕಾಲ ಸೂರತ್‌ನಲ್ಲಿರುವ ಆಲ್ಥಾನ್ ಸಮುದಾಯ ಭವನದಲ್ಲಿ ಅಟಲ್ ಕೋವಿಡ್ -19 ಕೇಂದ್ರದಲ್ಲಿ ದಾಖಲಾದ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ.
ನ್ಯೂಸ್ ಏಜೆನ್ಸಿಯೊಂದಿಗೆ ಮಾತನಾಡಿರುವ ಆಕೆ, ನಾನು ದಾದಿಯಾಗಿ ನನ್ನ ಕರ್ತವ್ಯವನ್ನು ಮಾಡುತ್ತಿದ್ದೇನೆ. ಜನರಿಗೆ ಸೇವೆ ಮಾಡುವುದನ್ನು ನಾನು ಪ್ರಾರ್ಥನೆ ಎಂದು ಪರಿಗಣಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.
ನನ್ನ ಗರ್ಭದಲ್ಲಿ ಮಗು ಇದೆ, ಆದರೆ ಕರ್ತವ್ಯ ನನಗೆ ಮುಖ್ಯವಾಗಿದೆ. ದೇವರ ಅನುಗ್ರಹದಿಂದ ಪವಿತ್ರ ರಂಜಾನ್ ವೇಳೆ ರೋಗಿಗಳಿಗೆ ಸೇವೆ ಸಲ್ಲಿಸಲು ನನಗೆ ಅವಕಾಶ ಸಿಕ್ಕಿದೆ ಎಂದು ಅವರು ಹೇಳಿದ್ದಾರೆ.
ಈಕೆ ಸಮರ್ಪಣಾ ಮನೋಭಾವ ನೆಟ್ಟಿಗರ ಮನಗೆದ್ದಿದ್ದು, ಮನದುಂಬಿ ಶ್ಲಾಘಿಸಿದ್ದಾರೆ.