ಹೈದರಾಬಾದ್ ನಲ್ಲಿ ನೂತನವಾಗಿ ಲೋಕಾರ್ಪಣೆಗೊಂಡ ದುರ್ಗಾಮ್ ಚೆರುವು ಸೇತುವೆ ಮೇಲೆ ಫೋಟೋ ತೆಗೆದುಕೊಳ್ಳಲು ಹೋಗಿ ಇಬ್ಬರು ಯುವಕರು ಜೈಲು ಪಾಲಾಗಿದ್ದಾರೆ.
ಮಧ್ಯ ರಸ್ತೆಯಲ್ಲಿ ಅರೆಬೆತ್ತಲಾಗಿ ಮಲಗಿದ ಯುವಕನ ಫೋಟೋವನ್ನ ಆತನ ಸ್ನೇಹಿತ ಕ್ಲಿಕ್ಕಿಸುತ್ತಿದ್ದ. ಇದನ್ನ ಇನ್ನೊಬ್ಬ ವ್ಯಕ್ತಿ ಸುಮ್ಮನೆ ನೋಡ್ತಾ ನಿಂತಿದ್ದ. ಈ ವೇಳೆ ಸ್ಥಳಕ್ಕಾಗಮಿಸಿದ ಹೈದರಾಬಾದ್ ಪೊಲೀಸರು ರೆಡ್ ಹ್ಯಾಂಡ್ ಆಗಿ ಕಿಡಿಗೇಡಿಗಳನ್ನ ಹಿಡಿದಿದ್ದಾರೆ. ಪೊಲೀಸರ ಜೀಪ್ ಸ್ಥಳಕ್ಕೆ ಬರ್ತಾ ಇದ್ದಂತೆ ಇಬ್ಬರು ಯುವಕರು ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಆದರೆ ಪೊಲೀಸರು ಆರೋಪಿಗಳನ್ನ ಹಿಡಿಯೋದ್ರಲ್ಲಿ ಯಶಸ್ವಿಯಾಗಿದ್ದಾರೆ.
ಮೇಲ್ಸೇತುವೆ ಮೇಲೆ ಈ ರೀತಿಯ ಫೋಟೋ ಹುಚ್ಚಾಟ ಇದೇ ಮೊದಲೇನಲ್ಲ. ಕೆಲ ತಿಂಗಳ ಹಿಂದೆ ದಂಪತಿ, ಸಂಚಾರ ದಟ್ಟಣೆ ನಡುವೆಯೂ ಸೇತುವೆ ಮೇಲೆ ಫೋಟೋ ತೆಗೆಸಿಕೊಳ್ತಿದ್ದ ಸಿಸಿ ಟಿವಿ ದೃಶ್ಯಾವಳಿ ವೈರಲ್ ಆಗಿತ್ತು.
ಈ ವಿಡಿಯೋವನ್ನ ಟ್ವಿಟರ್ನಲ್ಲಿ ಶೇರ್ ಮಾಡಿದ್ದ ಕಾರ್ಯಕರ್ತ ಸಾಯಿ ತೇಜ ಜನರ ಈ ರೀತಿಯ ಬುದ್ಧಿಹೀನ ನಡುವಳಿಕೆಗಳಿಂದ ದುರಂತ ಸಂಭವಿಸೋ ಸಾಧ್ಯತೆ ಇದೆ ಅಂತಾ ಕಳವಳ ವ್ಯಕ್ತಪಡಿಸಿದ್ದರು.
ಇನ್ನು ಈ ವಿಚಾರವಾಗಿ ಮಾಧಾಪುರ ಠಾಣೆ ಪೊಲೀಸ್ ಅಧಿಕಾರಿ ಕೂಡ ಟ್ವೀಟ್ ಮಾಡಿದ್ದು ರಾತ್ರಿ 11 ಗಂಟೆ ಬಳಿಕ ಸೇತುವೆ ಮೇಲೆ ವಾಹನ ಸಂಚಾರವನ್ನ ನಿರ್ಬಂಧಿಸಿದ್ದೇವೆ. ಆದರೆ ಮೇಲ್ಸೇತುವೆ ಮೇಲೆ ಪೊಲೀಸರ ಕಣ್ಗಾವಲು ಇದ್ದೇ ಇರುತ್ತದೆ. ಜನರ ಸುರಕ್ಷೆ ನಮ್ಮ ಜವಾಬ್ದಾರಿ ಅಂತಾ ಬರೆದುಕೊಂಡಿದ್ದಾರೆ.