ಹೈದರಾಬಾದ್: ಬಾಂಗ್ಲಾದೇಶದ ಮಹಿಳೆಯರ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) 9 ಮಂದಿ ಬಾಂಗ್ಲಾದೇಶದ ನಾಗರಿಕರು ಸೇರಿದಂತೆ 12 ಜನರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದೆ.
ಹೈದರಾಬಾದ್ ನಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಅಂತರಾಷ್ಟ್ರೀಯ ಮಾನವ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಏಜೆನ್ಸಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ. ಹೈದರಾಬಾದ್ ಹೊರವಲಯದಲ್ಲಿರುವ ರಾಚಕೊಂಡ ಕಮಿಷನರೇಟ್ ವ್ಯಾಪ್ತಿಯ ಮೆಹದಿಶರೀಫ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಾನವ ಕಳ್ಳಸಾಗಣೆ ಪ್ರಕರಣ ದಾಖಲಾದ ನಂತರದಲ್ಲಿ ಈ ಕ್ರಮ ಕೈಗೊಂಡಿದೆ.
2019 ರ ಸೆಪ್ಟಂಬರ್ನಲ್ಲಿ ಮೆಹದಿ ಶರೀಫ್ ಠಾಣೆ ಪೊಲೀಸರು ಬಾಲಾಪುರದ ಜಲಪಲ್ಲಿ ಮತ್ತು ಮೆಹಮ್ಮೂದ್ ಕಾಲೋನಿಯಲ್ಲಿ ಎರಡು ವೇಶ್ಯಾಗೃಹಗಳಿಂದ 10 ಜನರನ್ನು ಬಂಧಿಸಿದ್ದರು. ನಾಲ್ವರು ಬಾಂಗ್ಲಾದೇಶದ ಮಹಿಳೆಯರನ್ನು ರಕ್ಷಿಸಿ ಡಿಜಿಟಲ್ ಸಾಧನ, ನಕಲಿ ಗುರುತಿನ ದಾಖಲೆ ಮತ್ತು ಇತರೆ ದೋಷಾರೋಪಣೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದ್ದು, ಇದರ ಆಧಾರದ ಮೇಲೆ 2019 ರ ಡಿಸೆಂಬರ್ ನಲ್ಲಿ ಎನ್ಐಎ ಹೊಸ ಪ್ರಕರಣ ದಾಖಲಿಸಿ ತನಿಖೆ ಪ್ರಾರಂಭಿಸಿತ್ತು.
ಆರೋಪಿಗಳು ಬಾಂಗ್ಲಾದೇಶದಿಂದ ಯುವತಿಯರನ್ನು ಕಳ್ಳಸಾಗಣೆ ಮಾಡಿದ್ದಾರೆ ಎಂದು ತನಿಖೆಯಲ್ಲಿ ಗೊತ್ತಾಗಿದ್ದು ಅವರ ವಿರುದ್ಧ ಆರೋಪಪಟ್ಟಿ ಸಲ್ಲಿಕೆಯಾಗಿದೆ. ಅಕ್ರಮವಾಗಿ ಬಾಂಗ್ಲಾದೇಶದಿಂದ ಮಹಿಳೆಯರನ್ನು ಕರೆತಂದು ಭಾರತದ ವಿವಿಧ ಕಡೆಗಳಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸಲಾಗುತ್ತಿತ್ತು. 19 ರಿಂದ 25 ವರ್ಷದೊಳಗಿನ ಯುವತಿಯರನ್ನು ಸೋನಾಯ್ ನದಿ ಮತ್ತು ಕೋಲ್ಕತ್ತಾ ಮೂಲಕ ಭಾರತಕ್ಕೆ ಕಳ್ಳ ಸಾಗಣೆ ಮಾಡಲಾಗುತ್ತಿತ್ತು. ಕೆಲಸ, ಹೆಚ್ಚಿನ ವೇತನದ ಭರವಸೆ ನೀಡಿ ಕರೆತಂದು ವೇಶ್ಯಾವಾಟಿಕೆಗೆ ನೂಕಲಾಗುತ್ತಿತ್ತು. ಭಾರತದ ಮುಂಬೈ, ಹೈದರಾಬಾದ್ ಸೇರಿದಂತೆ ಹಲವು ಸ್ಥಳಗಳಿಗೆ ಕರೆದೊಯ್ದು ವೇಶ್ಯಾವಾಟಿಕೆ ನಡೆಸಲಾಗುತ್ತಿತ್ತು. ಈ ಮಾನವ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ ಎಂದು ಹೇಳಲಾಗಿದೆ.