ವಿಶೇಷ ಮೆಟ್ರೋ ರೈಲಿನ ಮುಖಾಂತರ ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ಜೀವಂತ ಹೃದಯವನ್ನ ಸಾಗಿಸಿದ ಘಟನೆ ಹೈದರಾಬಾದ್ನಲ್ಲಿ ನಡೆದಿದೆ. 30 ನಿಮಿಷದಲ್ಲಿ 21 ಕಿಲೋಮೀಟರ್ ದೂರವನ್ನ ಈ ವಿಶೇಷ ಮೆಟ್ರೋ ರೈಲು ಕ್ರಮಿಸಿದೆ.
ಹೈದರಾಬಾದ್ನ ಜ್ಯುಬಿಲಿ ಹಿಲ್ಸ್ನಲ್ಲಿರುವ ಅಪೋಲೋ ಆಸ್ಪತ್ರೆಯಲ್ಲಿ ದಾಖಲಾಗಿದ್ದ ರೋಗಿಯೊಬ್ಬರಿಗೆ ತುರ್ತು ಹೃದಯ ಕಸಿ ಮಾಡುವ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ಮಂಗಳವಾರ ಮಧ್ಯಾಹ್ನ ಹೈದಾರಾಬಾದ್ ಮೆಟ್ರೋ ನಿಗಮ ಎಲ್ ಬಿ ನಗರದಲ್ಲಿರುವ ಕಾಮಿನೇನಿ ಆಸ್ಪತ್ರೆಯಿಂದ ಜೀವಂತ ಹೃದಯವನ್ನ ಅಪೊಲೋ ಆಸ್ಪತ್ರೆಗೆ ರವಾನಿಸಲು ಸಹಾಯ ಮಾಡಿದೆ.
ಸಂಜೆ 4.40ರ ಸುಮಾರಿಗೆ ಅಪೋಲೋ ಆಸ್ಪತ್ರೆಯ ತಂಡ ಮೆಟ್ರೋದಲ್ಲಿ ಜೀವಂತ ಹೃದಯದ ಜೊತೆ ಪ್ರಯಾಣ ಆರಂಭಿಸಿದೆ. ಕೇವಲ 30 ನಿಮಿಷ ಅವಧಿಯಲ್ಲಿ ಈ ಮೆಟ್ರೋ ರೈಲು 16 ನಿಲ್ದಾಣಗಳನ್ನ ದಾಟಿದೆ. ರಸ್ತೆ ಮಾರ್ಗದಲ್ಲಿ ಪ್ರಯಾಣಿಸಿದ್ರೆ ಹೆಚ್ಚಿನ ಸಮಯಾವಕಾಶ ಬೇಕೆಂದು ಮೆಟ್ರೋ ಮಾರ್ಗವನ್ನ ಆಸ್ಪತ್ರೆ ಸಿಬ್ಬಂದಿ ಆಯ್ದುಕೊಂಡಿದ್ದರು.
ಇನ್ನು ಈ ವಿಚಾರವಾಗಿ ಮಾತನಾಡಿದ ಹೈದರಾಬಾದ್ ಮೆಟ್ರೋ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎನ್ವಿಎಸ್ ರೆಡ್ಡಿ, ಇದೇ ಮೊದಲ ಬಾರಿಗೆ ಮೆಟ್ರೋ ರೈಲಿನ ಮೂಲಕ ಜೀವಂತ ಹೃದಯವನ್ನ ಯಶಸ್ವಿಯಾಗಿ ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಹೇಳಿದ್ರು.