ಅಮೆರಿಕದ ಚಿಕಾಗೋದಲ್ಲಿದ್ದ ಹೈದರಾಬಾದ್ ಮೂಲದ 43 ವರ್ಷದ ವ್ಯಕ್ತಿ ಮೇಲೆ ಫೈರಿಂಗ್ ಮಾಡಲಾಗಿದ್ದು ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಕುಟುಂಬಸ್ಥರು ಹೇಳಿದ್ದಾರೆ.
ಮೊಹಮ್ಮದ್ ಮುಜಿಬುದ್ದೀನ್ ಮೇಲೆ ಗುಂಡು ಹಾರಿಸಲಾಗಿದ್ದು ಗಂಭೀರವಾಗಿ ಗಾಯಗೊಂಡ ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ವಿಚಾರವಾಗಿ ತೆಲಂಗಾಣ ಐಟಿ ಸಚಿವ ಕೆ.ಟಿ. ರಾಮದಾಸ್ಗೆ ಪತ್ನಿ ಪತ್ರ ಬರೆದು ಮಾಹಿತಿ ನೀಡಿದ್ದಾರೆ. ಮುಜಿಬುದ್ದೀನ್ ಪತ್ನಿ ಹಾಗೂ ಮಕ್ಕಳು ಹೈದರಾಬಾದ್ನಲ್ಲೇ ವಾಸಿಸುತ್ತಿದ್ದಾರೆ.
ಈ ಘಟನೆ ಬಳಿಕ ನನ್ನ ಇಡೀ ಕುಟುಂಬ ಆಘಾತಕ್ಕೊಳಗಾಗಿದೆ. ಅಮೆರಿಕದಲ್ಲಿ ನನ್ನ ಪತಿಯ ಆರೋಗ್ಯ ವಿಚಾರಿಸಲು ಯಾರೂ ಇಲ್ಲ. ಹೀಗಾಗಿ ಅವರ ಆರೋಗ್ಯ ವಿಚಾರಿಸಲು ಅಮೆರಿಕದಲ್ಲಿ ಭಾರತೀಯ ರಾಯಭಾರಿ ಕಚೇರಿ ನೆರವಾಗಬೇಕಿದೆ ಎಂದು ಮನವಿ ಮಾಡಿದ್ದಾರೆ. ಅಲ್ಲದೇ ಅಮೆರಿಕಕ್ಕೆ ಪ್ರಯಾಣ ಬೆಳೆಸಲು ತುರ್ತು ವೀಸಾ ಒದಗಿಸುವಂತೆಯೂ ಕೋರಿಕೊಂಡಿದ್ದಾರೆ.
ಅಮೆರಿಕದಲ್ಲಿರುವ ಮುಜಿಬುದ್ದೀನ್ ಆಪ್ತರು ನೀಡಿರುವ ಮಾಹಿತಿ ಪ್ರಕಾರ ಮುಜಿಬುದ್ದೀನ್ ವಾಹನದಲ್ಲಿ ತೆರಳುತ್ತಿದ್ದ ವೇಳೆ ಅಡ್ಡಹಾಕಿದ ಇಬ್ಬರು ದುಷ್ಕರ್ಮಿಗಳು ಗನ್ ಪಾಯಿಂಟ್ ತೋರಿಸಿ ಅವರನ್ನ ಕಾರಿನಿಂದ ಕೆಳಗಿಳಿಸಿ ಹಣ ದೋಚಿದ್ದು ಮಾತ್ರವಲ್ಲದೇ ಗುಂಡು ಹಾರಿಸಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.