ತೆಲಂಗಾಣದ ಮೇಡಕ್ ಜಿಲ್ಲೆಯ ಒಂಬತ್ತು ವರ್ಷದ ಬಾಲಕನೊಬ್ಬ ಅಪಘಾತವೊಂದರಲ್ಲಿ ತನ್ನೆರಡೂ ಕೈಗಳು ಹಾಗೂ ಕಾಲುಗಳನ್ನು ಕಳೆದುಕೊಂಡರೂ ಜೀವನೋತ್ಸಾಹವನ್ನು ಬಿಡದೇ ಮಾದರಿಯಾಗಿದ್ದಾನೆ.
ಅಪಘಾತವಾದ ಆರೇ ತಿಂಗಳ ಅವಧಿಯಲ್ಲಿ ತನ್ನ ಬಾಯಿಯಿಂದ ಚಿತ್ರಕಲೆ ಬಿಡಿಸುವುದನ್ನು ಕಲಿತ ಮಧುಕುಮಾರ್ ಇದೀಗ ಆ ಕಲೆಯಲ್ಲಿ ನಿಪುಣನಾಗಿದ್ದಾನೆ. ಈ ಕುರಿತು ಮಾತನಾಡಿದ ಮಧು ತಂದೆ ತುಳಜಾರಾಂ, “ನಾನು ಪಂಕ್ಚರ್ ಅಂಗಡಿಯೊಂದನ್ನು ನಡೆಸುತ್ತೇನೆ. ನನ್ನ ಮಗನ ಕೈ ಮತ್ತು ಕಾಲುಗಳನ್ನು ತೆಗೆಯಲೇಬೇಕೆಂದು ಗಾಂಧಿ ಆಸ್ಪತ್ರೆ ವೈದ್ಯರು ತಿಳಿಸಿದ ಬಳಿಕ ನಾನು ಹಾಗೂ ನನ್ನ ಮಡದಿ ಪ್ರಮಿಳಾ ಆತನ ಭವಿಷ್ಯದ ಬಗ್ಗೆ ಬಹಳ ಚಿಂತಿತರಾಗಿಬಿಟ್ಟಿದ್ದೆವು. ನಮಗೆ ಇನ್ನೂ ಮೂವರು ಮಕ್ಕಳನ್ನು ಸಾಕಬೇಕಾಗಿದೆ” ಎಂದಿದ್ದಾರೆ. ಕಲಾವಿದ ಸಮುದ್ರಲಾಲ್ ಹರ್ಷ, ಮಧು ಕೇಳಿದ ಬಳಿಕ ಆತನಿಗೆ ಬಾಯಿಯಿಂದ ಸ್ಕೆಚ್ ಹಾಕುವುದನ್ನು ಕಲಿಸಲು ಮುಂದಾಗಿದ್ದಾರೆ
ಸೆಪ್ಟೆಂಬರ್ 15ರಂದು, ಇಲ್ಲಿನ ಮುನಪಲ್ಲೆ ಮಂಡಲದ ಕಮ್ಕೋಲೆ ಗ್ರಾಮದ ತನ್ನ ಮನೆಯ ಟೆರೇಸ್‌ನಲ್ಲಿ ಆಟವಾಡುತ್ತಿದ್ದ ಮಧುಗೆ ವಿದ್ಯುತ್ ತಂತಿಯೊಂದಿಗೆ ಸಂಪರ್ಕಕ್ಕೆ ಬಂದ ಕಬ್ಬಿಣದ ರಾಡ್ ಒಂದು ಬಡಿದಿದೆ. ಇದಾದ ಬಳಿಕ ಆತನ ಕೈ-ಕಾಲುಗಳು ಸರಿಪಡಿಸಲಾರದ ಮಟ್ಟಕ್ಕೆ ಡ್ಯಾಮೇಜ್ ಆಗಿಬಿಟ್ಟಿದ್ದವು.