ಕೋವಿಡ್-19 ನಡುವೆಯೇ ಆಗಮಿಸಿರುವ ದೀಪಾವಳಿ ಹಬ್ಬಕ್ಕೆ ದೇಶವಾಸಿಗಳು ಸಂಭ್ರಮದಿಂದ ಸಜ್ಜಾಗುತ್ತಿದ್ದಾರೆ. ಕೋವಿಡ್-19 ಕಾರಣದಿಂದಾಗಿ ಸಾಕಷ್ಟು ಸಂಖ್ಯೆಯಲ್ಲಿ ಜನರು ಉದ್ಯೋಗ ಕಳೆದುಕೊಂಡಿದ್ದು ದೇಶದ ಅರ್ಥ ವ್ಯವಸ್ಥೆಗೆ ಪೆಟ್ಟು ಬಿದ್ದಿರುವುದು, ಸಾಕಷ್ಟು ಕುಟುಂಬಗಳಿಗೆ ಈ ಬಾರಿ ದೀಪಾವಳಿ ಅಷ್ಟೇನೂ ಶುಭವಾಗಿಲ್ಲ.
ಸಾಂಕ್ರಮಿಕದ ಕಾರಣದ ಅನೇಕ ಮಂದಿಗೆ ಉದ್ಯೋಗ ಇಲ್ಲದಂತೆ ಆಗಿರುವ ಹರಿಯಾಣಾದ ಹಿಸಾರ್‌ನ ಮಹಿಳೆಯರು ತಮ್ಮ ಕುಟುಂಬಗಳ ಆರ್ಥಿಕ ಹೊರೆಯನ್ನು ನಿರ್ವಹಿಸಲು ಹಾದಿಯೊಂದನ್ನು ಕಂಡುಕೊಂಡಿದ್ದಾರೆ.
ದೀಪಾವಳಿಗೆ ಮಾರಾಟ ಮಾಡಲು ಸಾವಯವ ದೀಪಗಳನ್ನು ತಯಾರಿಸುತ್ತಿರುವ ಈ ಮಹಿಳೆಯರು ಹಬ್ಬದ ದಿನಗಳಲ್ಲಿ ತಂತಮ್ಮ ಮನೆಗಳಲ್ಲಿ ಹಬ್ಬದ ದಿನ ಒಲೆ ಉರಿಯುವಂತೆ ನೋಡಿಕೊಳ್ಳಲು ಶ್ರಮಿಸುತ್ತಿದ್ದಾರೆ.
ಹರಿಯಾಣಾದ ಪಾಲಂ ವಿಹಾರ್‌ನಲ್ಲಿ ವಾಸಿಸುವ 48 ವರ್ಷದ ಶಾಲಿನಿ ಎಂಬ ಮಹಿಳೆಯೊಬ್ಬರು ತಮ್ಮ ಯತನ್ ಎನ್‌ಜಿಓ ಮೂಲಕ ಸಾವಯವ ದೀಪ ಹಾಗೂ ಧೂಪಗಳನ್ನು ತಯಾರಿಸಿ ಮಾರಾಟ ಮಾಡುವ ಕೆಲಸದ ಮೂಲಕ ಇಲ್ಲಿನ ಒಂದಷ್ಟು ಮಹಿಳೆಯರಿಗೆ ಕೆಲಸ ಕೊಟ್ಟಿದ್ದಾರೆ. ಲಾಕ್‌ಡೌನ್ ಅವಧಿಯಲ್ಲಿ ಒಪ್ಪೊತ್ತಿನ ಊಟಕ್ಕೂ ಸಂಕಷ್ಟದಲ್ಲಿದ್ದ ಅನೇಕ ಮಹಿಳೆಯರಿಗೆ ರೇಷನ್ ಸಹ ವಿತರಿಸಿದ್ದಾರೆ ಶಾಲಿನಿ.