ವಿಶ್ವದಾದ್ಯಂತ ಆವರಿಸಿರುವ ಅತಿ ಕ್ಷುಲ್ಲಕ ಜೀವಿ ಕೊರೋನಾ ವೈರಸ್, ತಾನೇ ಸರ್ವಸ್ವ ಎಂದು ಮೆರೆಯುತ್ತಿದ್ದ ಮಾನವನ ಜೀವನದಲ್ಲಿ ಕೆಲವೇ ದಿನದಲ್ಲಿ ಹಲವು ಬದಲಾವಣೆ ತಂದಿದೆ. ಮನುಕುಲದ ಮಹತ್ವಾಕಾಂಕ್ಷೆಯ ಓಟಕ್ಕೆ ಬ್ರೇಕ್ ಹಾಕಿದೆ.
ಪ್ರಕೃತಿಯ ಎದುರು ನಾವೆಷ್ಟು ಸಣ್ಣವರು, ನಮ್ಮ ಸ್ಥಾನವೇನು ಎಂಬುದನ್ನು ತಿಳಿಸಿದೆ. ಮಾನವೀಯ ಸಂಬಂಧಗಳ ಮಹತ್ವ ಹಿಂದೆಂದೂ ಇಲ್ಲದಷ್ಟು ಹೆಚ್ಚಿದೆ. ನಮ್ಮ ಸಂತೋಷದ ಪರಿಮಿತಿ ಚಿಕ್ಕದಾಗಿದೆ ಎಂಬುದನ್ನು ಅರ್ಥ ಮಾಡಿಸಿದೆ. ಮನೆಯಲ್ಲೇ ಕುಳಿತು ಕುಟುಂಬದ ಜತೆ ಕಾಲ ಕಳೆದರೂ ಖುಷಿಯಾಗಿರಬಹುದು ಎಂಬುದನ್ನು ತಿಳಿಸಿಕೊಟ್ಟಿದೆ.
ಬಾಹ್ಯ ತೋರಿಕೆಯ ಹಣ, ಅಧಿಕಾರ ಎಷ್ಟು ಕ್ಷುಲ್ಲಕ ಎಂಬುದನ್ನು ತಿಳಿಸಿದ್ದು, ಆಧ್ಯಾತ್ಮಿಕ ಚಿಂತನೆ, ಹುಡುಕಾಟಕ್ಕೆ ದಾರಿ ಮಾಡಿಕೊಟ್ಟಿದೆ. ರಾಜ್ಯ, ದೇಶ ಹಾಗೂ ವೈಯಕ್ತಿಕ ಮಿತಿಯ ಮಹತ್ವ ತಿಳಿಸಿದ್ದು, ಮಾನವನ ಆದ್ಯತೆಗಳನ್ನು ಬದಲು ಮಾಡಿದೆ.
ಸೆಲಿಬ್ರಿಟಿಗಳು, ಕೋಟ್ಯಧಿಪತಿಗಳನ್ನೂ ವೈರಸ್ ಬಿಟ್ಟಿಲ್ಲ. ಧಾರ್ಮಿಕ ಮಂದಿರಗಳ ಬಾಗಿಲು ಮುಚ್ಚಿಸಿದೆ. ಐಶಾರಾಮಿ ಕಾರುಗಳು ಗ್ಯಾರೇಜ್ ಒಳಗೆ ನಿಂತಿವೆ. ದುಬಾರಿ ವಸ್ತುಗಳು ಮಹತ್ವ ಕಳೆದುಕೊಂಡಿವೆ.
ಅಗತ್ಯ ಸೇವೆ ನೀಡುವ ವೈದ್ಯರು, ಆರೋಗ್ಯ ಸಿಬ್ಬಂದಿ, ಪೊಲೀಸರು, ಸ್ವಚ್ಛತಾ ಕರ್ಮಿಗಳು, ಅಗತ್ಯ ವಸ್ತು ಉತ್ಪಾದಕರು, ದಿನಸಿ ತರಕಾರಿಯನ್ನು ಮನೆಬಾಗಿಲಿಗೆ ತಲುಪಿಸುವವರ ಮಹತ್ವವನ್ನು ತಿಳಿಸಿಕೊಟ್ಟಿದೆ.
ಮಾನವನ ಜೀವನದ ಮಹತ್ವ ತಿಳಿಸಿಕೊಟ್ಟಿದೆ. ವೈದ್ಯಕೀಯ ವ್ಯವಸ್ಥೆಗೆ ಹೆಚ್ಚು ಮಹತ್ವ ದೊರಕಿದೆ. ಮಾನವನ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸಂಶೋಧನೆಗಳಿಗೆ ಅನುದಾನ ದೊರೆತು ಈ ನಿಟ್ಟಿನಲ್ಲಿ ಸಂಶೋಧನೆಗಳು ಪ್ರಾರಂಭವಾಗಿವೆ. ನಕಲಿ ನಾಯಕರ ಬಣ್ಣ ಬಯಲು ಮಾಡಿದೆ. ನಿಜವಾದ ನಾಯಕ ಯಾರು ಎಂಬುದನ್ನು ತೋರಿಸಿದೆ.