ಮಹಿಳಾ ಸಬಲೀಕರಣದ ಬಗ್ಗೆ ಎಲ್ಲರೂ ಮಾತನಾಡ್ತಾರೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರಿಗೆ ಸಾಧನೆ ಮಾಡಬೇಕು ಅಂದರೆ ಹಾದಿ ಸುಲಭವಾಗಂತೂ ಇರೋದಿಲ್ಲ. ಆದರೆ ಈ ಎಲ್ಲಾ ಸವಾಲುಗಳನ್ನ ದಾಟಿ ಮಂಜು ದೇವಿ ಎಲ್ಲರಿಗೂ ಮಾದರಿಯಾಗಿದ್ದಾರೆ.
ಬಿಹಾರದ ಮುಂಗೇರ್ ಜಿಲ್ಲೆಯ ನಿವಾಸಿಯಾಗಿರುವ ಮಂಜು ಬಹಳ ಚಿಕ್ಕ ವಯಸ್ಸಿನಲ್ಲೇ ವಿವಾಹವಾಗಿದ್ದರು. ಶಿಕ್ಷಕಿಯಾಗಬೇಕೆಂದ ಕನಸು ಕಂಡಿದ್ದ ಮಂಜು ಕುಟುಂಬಸ್ಥರ ಒತ್ತಾಯದಿಂದಾಗಿ ತಮ್ಮ ಕನಸನ್ನ ಬದಿಗಿಟ್ಟು ವಿವಾಹಕ್ಕೆ ಒಪ್ಪಿಗೆ ನೀಡಿದ್ದರು.
ಆದರೆ ಎನ್ಜಿಒ ಒಂದರ ಸದಸ್ಯರ ನಡುವಿನ ಆಕಸ್ಮಿಕ ಭೇಟಿಯಿಂದಾಗಿ ಆಕೆಯ ಜೀವನವೇ ಬದಲಾಗಿದೆ. ಆಕ್ಸ್ಫ್ಯಾಮ್ ಇಂಡಿಯಾ ಹಾಗೂ ಸೇವಾ ಭಾರತ್ ಸದಸ್ಯರ ನೆರವಿನಿಂದ ಕೃಷಿ ಕ್ಷೇತ್ರದಲ್ಲಿ ತರಬೇತಿ ಪಡೆದ್ರು. 2016ರಿಂದ ಮಂಜು ಜೀವನವೇ ಬದಲಾಯ್ತು.
ಹೊಸ ಮಾದರಿ ಮೂಲಕ ಟೊಮ್ಯಾಟೋ ಬೆಳೆ ಬೆಳೆದ ಮಂಜು ಇದರಿಂದ 15 ಸಾವಿರ ರೂಪಾಯಿ ಸಂಪಾದಿಸಿದ್ರು. ಈ ಯಶಸ್ಸು ಮಂಜುಗೆ ಆರ್ಥಿಕವಾಗಿ ಸ್ವಾವಲಂಬಿಯಾಗಲು ಸಹಾಯಕವಾಯ್ತು. ಇದಾದ ಕೆಲವೇ ದಿನಗಳಲ್ಲಿ ಜೀವಿಕಾ – ಬಿಹಾರ ಗ್ರಾಮೀಣ ಜೀವನೋಪಾಯ ಪ್ರಚಾರ ಸಂಘದ ಮೊಬಿಲೈಸರ್ ಆದರು. ಸ್ಥಳೀಯ ನಿವಾಸಿಗಳಿಗೆ ಕೃಷಿ ಸಂಬಂಧಿ ಗೊಂದಲಗಳಿಗೆ ಪರಿಹಾರ ನೀಡಲು ಆರಂಭಿಸಿದ್ರು.
ಇದಾದ ಬಳಿಕ ಸ್ವಂತ ಜಮೀನನ್ನ ಖರೀದಿ ಮಾಡಿದ್ರು. ಇದೀಗ ಮಂಜು ಕೃಷಿ ಮೂಲಕ ವರ್ಷಕ್ಕೆ 60 ರಿಂದ 80 ಸಾವಿರ ರೂಪಾಯಿ ಲಾಭ ಗಳಿಸುತ್ತಿದ್ದಾರೆ.