ಮಂಗಳನ ಅಂಗಳಕ್ಕೆ ಮೊದಲ ಯತ್ನದಲ್ಲೇ ಯಶಸ್ವಿಯಾಗಿ ಕಾಲಿಟ್ಟ ಭಾರತದ ಐತಿಹಾಸಿಕ ಸಾಧನೆಯ ಹಿಂದೆ ಇರುವ ಅಚ್ಚರಿಯ ಟ್ವಿಸ್ಟ್ ಒಂದನ್ನು ಇಸ್ರೋನ ಹಿರಿಯ ತಂತ್ರಜ್ಞರೊಬ್ಬರು ಬಿಚ್ಚಿಟ್ಟಿದ್ದಾರೆ.
ಇಸ್ರೋನಲ್ಲಿ ಉಪಗ್ರಹಗಳನ್ನು ಅಭಿವೃದ್ಧಿಪಡಿಸುವ ಹೊಣೆಗಾರಿಕೆ ಹೊತ್ತಿದ್ದ ಡಾ ಮೈಲ್‌ಸ್ವಾಮಿ ಅಣ್ಣಾದುರೈ, ಈ ಸ್ವಾರಸ್ಯಕರ ವಿಚಾರವನ್ನು ತಿಳಿಸಿದ್ದಾರೆ.
“ಚಂದ್ರಯಾನ-1ರ ಒಳ್ಳೆಯ ಕಾರ್ಯಕ್ಷಮತೆಯಿಂದ ಚಂದ್ರನಲ್ಲಿ ನೀರು ಇರುವ ಸಾಕ್ಷಿಗಳನ್ನು ಕಂಡುಕೊಂಡೆವು. ಇದಾದ ಬಳಿಕ ಭಾರತದ ಬಾಹ್ಯಾಕಾಶ ಏಜೆನ್ಸಿ ರಷ್ಯಾದ ಸಹಯೋಗದೊಂದಿಗೆ ಚಂದ್ರಯಾನ-2 ಮಿಶನ್ ಮೇಲೆ ಕೆಲಸ ಮಾಡುತ್ತಿತ್ತು.
ಈ ಮಿಶನ್‌ಗಾಗಿ ಇಸ್ರೋ ಆರ್ಬಿಟರ್ ಅನ್ನು ಅಭಿವೃದ್ಧಿಪಡಿಸುತ್ತಿದ್ದರೆ ರಷ್ಯಾ ಲ್ಯಾಂಡರ್ ಅಭಿವೃದ್ಧಿ ಪಡಿಸುವುದಿತ್ತು. ಆದರೆ ಲ್ಯಾಂಡರ್‌ಗೆ ಮಾರ್ಪಾಡು ಮಾಡಬೇಕು ಎಂದ ರಷ್ಯಾ ಈ ಯೋಜನೆಯಿಂದ ಹಿಂದೆ ಸರಿಯಿತು. ರಷ್ಯಾದ ಈ ನಡೆಯಿಂದ ಭಾರತ ತನ್ನದೇ ಶ್ರಮದಲ್ಲಿ ಲ್ಯಾಂಡರ್ ನಿರ್ಮಿಸಲು ಇನ್ನೂ 7-8 ವರ್ಷಗಳು ಬೇಕಾಗಿದ್ದವು.
ಆಗ ಹೊಳೆದಿದ್ದೇ ಮತ್ತೊಂದು ಮಿಶನ್‌ನ ಐಡಿಯಾ. ಭಾರತದ ಬಳಿ ಆರ್ಬಿಟರ್ ಇತ್ತು. ಮಂಗಳನ ಅಂಗಳಕ್ಕೆ ಪ್ರತಿ ವರ್ಷ ಹೋಗಲು ಪ್ರಯತ್ನ ಮಾಡಲು ಸಾಧ್ಯವಾಗುವುದಿಲ್ಲ. ಈ ಅವಕಾಶ 26 ತಿಂಗಳಿಗೆ ಒಮ್ಮೆ ಬರುತ್ತದೆ. 2011ರ ಅಂತ್ಯದ ವೇಳೆ ರಷ್ಯನ್ನರು ಮಿಶನ್‌ನಿಂದ ಹಿಂದೆ ಸರಿದಿದ್ದರು. ಹೀಗಾಗಿ ನಾವು 2013ರ ಅಂತ್ಯಕ್ಕೆ ಮಂಗಳನತ್ತ ಪಯಣ ಬೆಳೆಸಿದೆವು. ನಮ್ಮ ಬಳಿ ಇದ್ದ ಕಡಿಮೆ ಅವಧಿಯಲ್ಲಿ ಹಾರ್ಡ್‌ವೇರ್ ಹಾಗೂ ಸಾಫ್ಟ್‌ವೇರ್‌ಗಳನ್ನು ಮಾರ್ಪಾಡು ಮಾಡಿಕೊಂಡು ಚಂದ್ರನ ಆರ್ಬೈಟರ್ ಅನ್ನು ಮಂಗಳನ ಆರ್ಬೈಟರ್ ಆಗಿ ಬದಲಿಸಿದೆವು” ಎಂದು ಅಣ್ಣಾದುರೈ ವಿವರಿಸಿದ್ದಾರೆ.