ನವದೆಹಲಿ: ಬಿಜೆಪಿ ವಿವಿಧ ವಿಧಾನಸಭೆ ಚುನಾವಣೆ, ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ಉಪ ಚುನಾವಣೆಗಳನ್ನು ಗೆಲ್ಲುತ್ತಿದೆ. ಆದರೆ, ಈ ನಡುವೆ ಹಲವು ಮಿತ್ರ ಪಕ್ಷಗಳನ್ನು ಕಳೆದುಕೊಳ್ಳುತ್ತಿದೆ.
2021 ರ ಏಪ್ರಿಲ್, ಮೇ ತಿಂಗಳಲ್ಲಿ ನಡೆಯುವ ತಮಿಳುನಾಡು ವಿಧಾನಸಭೆ ಚುನಾವಣೆಯನ್ನು ಸ್ವತಂತ್ರವಾಗಿ ಎದುರಿಸಲಿದೆ ಎಂದು ಎನ್ಡಿಎ ಮಿತ್ರ ಪಕ್ಷ ಎಐಎಡಿಎಂಕೆ ಈಗಾಗಲೇ ತಿಳಿಸಿದೆ.
ರಾಜ್ಯಸಭಾ ಸದಸ್ಯ ಹಾಗೂ ಎಐಎಡಿಎಂಕೆ ಕೋ ಆರ್ಡಿನೇಟರ್ ಕೆ.ಪಿ. ಮುನುಸ್ವಾಮಿ ಭಾನುವಾರ ಚುನಾವಣೆ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿ ಈ ವಿಷಯ ಘೋಷಿಸಿದ್ದಾರೆ. ಹಾಲಿ ಸಿಎಂ ಇಡಪ್ಪಡಿ ಪಳನಿಸ್ವಾಮಿ ಅವರೇ ನಮ್ಮ ಮುಂದಿನ ಸಿಎಂ ಅಭ್ಯರ್ಥಿ. ನಾವೇ ಮಿತ್ರತ್ವ ಲೀಡ್ ಮಾಡುತ್ತೇವೆ. ರಾಷ್ಟ್ರೀಯ ಪಕ್ಷಗಳು ಬೇಕಾದರೆ ನಮ್ಮ ಜತೆ ಬಂದು ಸೇರಿಕೊಳ್ಳಬಹುದು ಎಂದಿದ್ದಾರೆ.
ಇತ್ತೀಚೆಗೆ ಜೆಡಿಯು ಬಿಜೆಪಿ ವಿರುದ್ಧ ಕಿಡಿ ಕಾರಿದೆ. ಬಿಜೆಪಿ ಜಾರಿಗೆ ತರುತ್ತಿರುವ ಕಾಯ್ದೆಗಳ ವಿರುದ್ಧ ಬಿಹಾರ ಸಿಎಂ ನಿತೀಶ್ ಕುಮಾರ್ ಮಾತನಾಡಿದ್ದಾರೆ.
ಕಳೆದ ವಾರ ಆರ್ ಎಲ್ ಪಿ ಲೋಕಸಭಾ ಸದಸ್ಯ ಹನುಮಾನ್ ಬೆನಿವಾಲ್ ಬಿಜೆಪಿ ಮಿತ್ರತ್ವ ತೊರೆದಿದ್ದರು. ಕಳೆದ ತಿಂಗಳು ಬಿಜೆಪಿ ಈಶಾನ್ಯ ರಾಜ್ಯದಲ್ಲಿ ಬೊಡೊಲ್ಯಾಂಡ್ ಟೆರಿಟೋರಿಯಲ್ ಕೌನ್ಸಿಲ್(ಬಿಟಿಸಿ)ಮಿತ್ರತ್ವ ಕಳೆದುಕೊಂಡಿತ್ತು.