ಶಹೀನಾಬಾಗ್ ನಲ್ಲಿ ರಾಷ್ಟ್ರವ್ಯಾಪಿ ಪೌರತ್ವ ವಿರೋಧಿ ಕಾಯ್ದೆ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿದ್ದ ಆರೋಪ ಹೊತ್ತಿರುವ ಕಪಿಲ್ ಗುಜ್ಜರ್ ಬಿಜೆಪಿಗೆ ಸೇರಿದ ಕೆಲವೇ ಗಂಟೆಗಳಲ್ಲಿ ತಮ್ಮ ಸದಸ್ಯತ್ವ ಕಳೆದುಕೊಂಡಿದ್ದಾರೆ.
ಫೆಬ್ರವರಿ ತಿಂಗಳಲ್ಲಿ ದೆಹಲಿಯ ಶಹೀನಾಬಾಗ್ ನಲ್ಲಿ ಫೈರಿಂಗ್ ನಡೆಸಿದ್ದಾರೆ ಎಂಬ ಆರೋಪ ಹೊತ್ತಿದ್ದ ಕಪಿಲ್ ಗುಜ್ಜರ್ ಪಕ್ಷದ ಕಚೇರಿಯಲ್ಲಿ ಬುಧವಾರ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಆದರೆ ಈತನ ಆರೋಪದ ಬಗ್ಗೆ ಚರ್ಚೆಗಳು ವ್ಯಾಪಕವಾಗಿ ಹರಿದಾಡುತ್ತಿದ್ದಂತೆಯೇ ಬಿಜೆಪಿ, ಕಪಿಲ್ ಸದಸ್ಯತ್ವವನ್ನ ರದ್ದು ಮಾಡಿದೆ.
ಈ ವಿಚಾರವಾಗಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ್ ಶರ್ಮಾ, ಕಪಿಲ್ ಗುಜ್ಜರ್ ಹಿನ್ನೆಲೆ ಬಗ್ಗೆ ನಮಗೆ ಯಾವುದೇ ಮಾಹಿತಿ ಇರಲಿಲ್ಲ. ಅವರು ಬೆಂಬಲಿಗರೊಡನೆ ಪಕ್ಷ ಸೇರ್ಪಡೆಗೆ ಬಂದಿದ್ದಾಗ ಅವರ ಕ್ರಿಮಿನಲ್ ಪೂರ್ವಾಪರದ ಬಗ್ಗೆ ನಮಗೆ ತಿಳಿದಿರಲಿಲ್ಲ. ಇದರ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಅವರ ಸದಸ್ಯತ್ವವನ್ನ ರದ್ದು ಮಾಡಿದ್ದೇವೆ ಎಂದು ಹೇಳಿದ್ರು.
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ವಿಡಿಯೋಗಳಲ್ಲಿ ಗುಜ್ಜರ್, ನಮ್ಮ ದೇಶದಲ್ಲಿ ಹಿಂದೂಗಳು ಮಾತ್ರ ಮೇಲುಗೈ ಸಾಧಿಸ್ತಾರೆ. ಬೇರೆ ಯಾರೂ ಅಲ್ಲ ಎಂದು ಹೇಳಿದ್ದರು. ಅಲ್ಲದೇ ಪೊಲೀಸರು ಅವರನ್ನ ಬಂಧಿಸೋದಕ್ಕೂ ಮುನ್ನ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿದ್ರು.