ನವದೆಹಲಿ: ದೆಹಲಿಯಲ್ಲಿ ಪಡಿತರಚೀಟಿದಾರರಿಗೆ ಸರ್ಕಾರ ಮತ್ತೊಂದು ಅನುಕೂಲ ಕಲ್ಪಿಸಲು ಮುಂದಾಗಿದ್ದು, ಮನೆ ಬಾಗಿಲಿಗೆ ಪಡಿತರ ಪೂರೈಕೆ ಮಾಡಲು ಯೋಜನೆ ರೂಪಿಸಿದೆ.
ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಈ ಕುರಿತು ಮಾಹಿತಿ ನೀಡಿ, ಪಡಿತರ ಚೀಟಿದಾರರು ಇನ್ನು ಮುಂದೆ ಪಡಿತರವನ್ನು ಪಡೆದುಕೊಳ್ಳಲು ಪಡಿತರ ಅಂಗಡಿಗೆ ಬರಬೇಕಿಲ್ಲ. ಬಡ ಜನರ ಮನೆಬಾಗಿಲಿಗೆ ಪಡಿತರ ಪೂರೈಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಪ್ರತಿ ತಿಂಗಳು ಸುಮಾರು 72 ಲಕ್ಷ ಜನರ ಮನೆ ಬಾಗಿಲಿಗೆ ಪಡಿತರ ಪೂರೈಕೆ ಮಾಡಲಾಗುವುದು. ಮನೆ ಬಾಗಿಲಲ್ಲಿ ಪಡಿತರ ಪಡೆಯುವ ಇಲ್ಲವೇ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಪಡೆದುಕೊಳ್ಳುವ ಆಯ್ಕೆಯನ್ನು ಪಡಿತರ ಚೀಟಿದಾರರಿಗೆ ಬಿಡಲಾಗುವುದು. ಇನ್ನು ಕೆಲವೇ ತಿಂಗಳಲ್ಲಿ ದೆಹಲಿಯಲ್ಲಿ ‘ಮುಖ್ಯಮಂತ್ರಿ ಘರ್ ಘರ್ ರೇಷನ್ ಯೋಜನೆ’ ಆರಂಭಿಸಲಿದ್ದು, ಅದೇ ದಿನ ಕೇಂದ್ರ ಸರ್ಕಾರದ ‘ಒನ್ ನೇಷನ್ ಒನ್ ರೇಷನ್ ಕಾರ್ಡ್ ಯೋಜನೆ’ಯನ್ನೂ ಕೂಡ ಜಾರಿಗೆ ತರಲಾಗುವುದು ಎಂದು ತಿಳಿಸಿದ್ದಾರೆ.