ಮಹಾತ್ಮಾ ಗಾಂಧಿಯವರ ಹತ್ಯೆ ಮಾಡಿದ ನಾಥುರಾಂ ಗೋಡ್ಸೆಯ ಜೀವನದ ಬಗ್ಗೆ ಜನರಿಗೆ ತಿಳಿಸಲು ಮುಂದಾಗಿರುವ ಹಿಂದೂ ಮಹಾಸಭಾ, ಆತನ ಹೆಸರಿನಲ್ಲಿ ಯೂಟ್ಯೂಬ್ ಚಾನೆಲ್ ಒಂದನ್ನು ಆರಂಭಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಯುವ ಸಮೂಹಕ್ಕೆ ಗೋಡ್ಸೆ ಬಗ್ಗೆ ಅರಿವು ಮೂಡಿಸುವ ದೃಷ್ಟಿಯಿಂದ ಆತನ ಬಗ್ಗೆ ಯೂಟ್ಯೂಬ್ ಚಾನೆಲ್ ಆರಂಭ ಮಾಡುತ್ತಿರುವುದಾಗಿ ಮಹಾಸಭಾದ ವಕ್ತಾರ ಅಭಿಷೇಕ್ ಅಗರ್ವಾಲ್ ತಿಳಿಸಿದ್ದಾರೆ. “ಗಾಂಧಿ ಹತ್ಯೆಯ ಬಗ್ಗೆ ಪೂರ್ಣ ಮಾಹಿತಿ ನೀಡಲಿರುವ ಚಾನೆಲ್, ಗೋಡ್ಸೆ ಮಾಡಿದ್ದ ಒಳ್ಳೆಯ ಕೆಲಸಗಳ ಬಗ್ಗೆಯೂ ತಿಳಿಸಲಿದೆ” ಎನ್ನುತ್ತಾರೆ ಅಗರ್ವಾಲ್.
ನಿರೀಕ್ಷೆಯಂತೆಯೇ ಈ ನಡೆಗೆ ಪರ/ವಿರೋಧದ ಮಾತುಗಳು ಸಾಕಷ್ಟು ಕೇಳಿ ಬಂದಿವೆ. ಕೇಸರಿ ಪಾಳೆಯದ ಅನೇಕ ಸಂಘಟನೆಗಳು ಗೋಡ್ಸೆಯನ್ನು ಹೀರೋ ಎಂದರೆ ಜಾತ್ಯಾತೀತ ಸಿದ್ದಾಂತವಾದಿಗಳು ಈ ಬಗ್ಗೆ ತೀವ್ರ ವಿರೋಧ ಮಾಡುತ್ತಾರೆ.
“ಈ ಟ್ರೆಂಡ್ ಅನ್ನು ಯಾರು ಹುಟ್ಟುಹಾಕುತ್ತಿದ್ದಾರೆ ಎಂದು ನನಗೆ ಗೊತ್ತು. ಗೋಡ್ಸೆಗಿಂತ ಗಾಂಧಿ ಕನಸಿನ ಭಾರತವೇ ಉಳಿದುಕೊಳ್ಳಲಿದೆ ಎಂಬ ಬಗ್ಗೆ ನನಗೆ ಯಾವುದೇ ಅನುಮಾನವಿಲ್ಲ” ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.