ಕೊರೊನಾ ವೈರಸ್ ಸಾಂಕ್ರಾಮಿಕ ಸಂದರ್ಭದಲ್ಲಿ ಜನರು ಆಸ್ಪತ್ರೆಗಳಿಗೆ ನಿಯಮಿತವಾಗಿ ತಪಾಸಣೆಗೆ ಹೋಗುವ ಬದಲು ಆನ್ಲೈನಲ್ಲೇ ವೈದ್ಯರೊಂದಿಗೆ ಸಮಾಲೋಚನೆ ಆದ್ಯತೆ ನೀಡುತ್ತಿದ್ದಾರೆ.
ಹೀಗಿರುವಾಗ ಆರೋಗ್ಯ ವಿಮಾ ಪಾಲಿಸಿಯಡಿಯಲ್ಲಿ ಟೆಲಿಮೆಡಿಸಿನ್ ಸಮಾಲೋಚನೆಗಾಗಿ ಅವಕಾಶ ದೊರೆಯಬೇಕೆಂದು ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು ವಿಮಾ ಕಂಪನಿಗಳ ಮುಂದೆ ಪ್ರಸ್ತಾಪಿಸಿದೆ.
ಅಕ್ಟೋಬರ್ ನಿಂದ ಆರಂಭವಾಗುವಂತೆ ಟೆಲಿಮೆಡಿಸಿನ್ ಕನ್ಸಲ್ಟೇಶನ್ ಕೂಡ ಆರೋಗ್ಯ ವಿಮಾ ಪಾಲಿಸಿಯ ವ್ಯಾಪ್ತಿಗೆ ಬರಲಿದೆ. ಪಾಲಿಸಿ ಒಪ್ಪಂದದ ನಿಯಮಗಳು ಮತ್ತು ಷರತ್ತುಗಳಲ್ಲಿ ವೈದ್ಯರೊಂದಿಗೆ ಸಾಮಾನ್ಯ ಸಮಾಲೋಚನೆಯನ್ನು ಅನುಮತಿಸಿದಂತೆ, ಟೆಲಿಮೆಡಿಸಿನ್ ಸಮಾಲೋಚನೆಗಾಗಿ ಪರಿಗಣಿಸಿ ಕ್ಲೈಂ ಇತ್ಯರ್ಥಪಡಿಸುವಂತೆ ನಿಯಂತ್ರಣ ಪ್ರಾಧಿಕಾರ ವಿಮಾ ಕಂಪೆನಿಗಳಿಗೆ ಸೂಚಿಸಿದೆ.
ವೈದ್ಯರಿಂದ ಟೆಲಿಮೆಡಿಸಿನ್ ಸಮಾಲೋಚನೆ ತೆಗೆದುಕೊಳ್ಳುವವರು (ಷರತ್ತಿಗೊಳಪಟ್ಟು) ಹೊರರೋಗಿ ವಿಭಾಗದ (ಒಪಿಡಿ) ವೆಚ್ಚ ಒಳಗೊಂಡಿದ್ದರೆ ಆರೋಗ್ಯ ವಿಮಾ ಪಾಲಿಸಿಯಡಿಯಲ್ಲಿ ಖರ್ಚುಗಳನ್ನು ಪಡೆಯಲು ಅನುಮತಿಸಲಾಗುತ್ತದೆ. ಟೆಲಿಮೆಡಿಸಿನ್ ಸಮಾಲೋಚನೆಗಳು ಆಸ್ಪತ್ರೆಯ ಪೂರ್ವ ಅಥವಾ ನಂತರದ ಖರ್ಚಿನ ಭಾಗವಾಗಿದ್ದರೆ, ಗ್ರಾಹಕರು ಆರೋಗ್ಯ ವಿಮಾ ಪಾಲಿಸಿಯ ವ್ಯಾಪ್ತಿಯಲ್ಲಿ ಪರಿಹಾರ ಪಡೆಯಬಹುದು ಎಂದು ಹೇಳಲಾಗಿದೆ.