ದೆಹಲಿ ಹೈಕೋರ್ಟ್ ಸೋಮವಾರ ನಡೆಸಿದ ವಿಚಾರಣೆಯಲ್ಲಿ 28 ವಾರದ ಗರ್ಭಿಣಿಗೆ ಗರ್ಭಪಾತ ಮಾಡಿಕೊಳ್ಳಲು ವಿಶೇಷ ಅನುಮತಿ ನೀಡಿದೆ. ಏಮ್ಸ್ ಆಸ್ಪತ್ರೆ ವೈದ್ಯರು ನೀಡಿದ ವರದಿಯ ಪ್ರಕಾರ ಮಹಿಳೆಯರ ಗರ್ಭದಲ್ಲಿರುವ ಮಗು ಅನೆನ್ಸೆಫಲಿ ಎಂಬ ಕಾಯಿಲೆಯಿಂದ ಬಳಲುತ್ತಿದ್ದು ಈ ಸಂಬಂಧ ವಿಚಾರಣೆ ನಡೆಸಿದ ಕೋರ್ಟ್ ಗರ್ಭಪಾತಕ್ಕೆ ಅನುಮತಿ ನೀಡಿದೆ.
ಅನೆನ್ಸೆಫಲಿ ಮೆದುಳಿಗೆ ಸಂಬಂಧಿಸಿದ ಕಾಯಿಲೆಯಾಗಿದ್ದು ಇದರಿಂದ ಬಳಲುವ ಮಗುವಿನ ತಲೆ ಬುರುಡೆಯ ಮೂಳೆ ಸರಿಯಾದ ಬೆಳವಣಿಗೆಯನ್ನ ಕಾಣೋದಿಲ್ಲ. ಇದರಿಂದಾಗಿ ದಿವ್ಯಾಂಗ ಚೇತನ ಮಗು ಜನಿಸುತ್ತೆ. ಹೀಗಾಗಿ ಮುಖ್ಯ ನ್ಯಾಯಮೂರ್ತಿ ಡಿ. ಎನ್. ಪಾಟೀಲ್ ಹಾಗೂ ನ್ಯಾಯಮೂರ್ತಿ ಜ್ಯೋತಿ ಸಿಂಗ್ ನೇತೃತ್ವದ ಪೀಠ ಮಹಿಳೆಯ ಗರ್ಭಪಾತಕ್ಕೆ ವಿಶೇಷ ಅನುಮತಿ ನೀಡಿದೆ. ಶೀಘ್ರದಲ್ಲೇ ವಿವರಣಾತ್ಮಕ ಆದೇಶವನ್ನ ಹೊರಡಿಸೋದಾಗಿ ಕೋರ್ಟ್ ಹೇಳಿದೆ.
ಜನವರಿ 7ರಂದು ಏಮ್ಸ್ಗೆ ದೆಹಲಿ ಹೈಕೋರ್ಟ್ ಗರ್ಭಿಣಿ ಹಾಗೂ ಮಗುವಿನ ಆರೋಗ್ಯ ಸಂಬಂಧ ವರದಿ ತಯಾರಿಸಿ ಕೋರ್ಟ್ಗೆ ನೀಡುವಂತೆ ಸೂಚನೆ ನೀಡಿತ್ತು. ಜನವರಿ 11ಕ್ಕೆ ಈ ವರದಿಯನ್ನು ಕೋರ್ಟ್ಗೆ ಸಲ್ಲಿಸುವಂತೆ ಹೇಳಿತ್ತು.