ರಾಂಚಿ: ಕೊರೊನಾ ಶಾಲೆಗಳ ಬಾಗಿಲು ಮುಚ್ಚಿಸಿ 6 ತಿಂಗಳು ಕಳೆದಿದೆ. ಶಾಲೆಗಳನ್ನು ತೆರೆಯಲು ಸರ್ಕಾರಗಳು ಆತಂಕಪಡುತ್ತಿವೆ. ಈ ನಡುವೆ ಮಕ್ಕಳ ಶಿಕ್ಷಣ ಹಾಳಾಗಬಾರದು ಎಂದು ಖಾಸಗಿ ಶಾಲೆಗಳು, ಕಾಲೇಜ್‌ಗಳು ಆನ್‌ಲೈನ್ ತರಗತಿ ಪ್ರಾರಂಭಿಸಿವೆ. ಶ್ರೀಮಂತರು ಸ್ಮಾರ್ಟ್ ಫೋನ್, ಲ್ಯಾಪ್ ಟಾಪ್ ಕೊಂಡು ಆನ್‌ಲೈನ್ ಕ್ಲಾಸ್ ಪಡೆಯಬಹುದು. ಆದರೆ, ಹಣವಿಲ್ಲದ ಬಡವರು, ನೆಟ್ವರ್ಕ್ ಇಲ್ಲದ ಹಳ್ಳಿಯ ಜನ ಏನು ಮಾಡಬೇಕು…?
ಕರ್ನಾಟಕದ ಶಿಕ್ಷಣ ಇಲಾಖೆ ವಿದ್ಯಾಗಮ ಯೋಜನೆಯ ಮೂಲಕ ಸರ್ಕಾರಿ ಶಾಲೆಯ ಮಕ್ಕಳಿಗೆ ಮನೆಗಳ ಸಮೀಪವೇ ಶಿಕ್ಷಣ ಸಿಗುವ ವ್ಯವಸ್ಥೆ ಮಾಡುತ್ತಿದೆ. ಶಿಕ್ಷಕರು ದೇವಸ್ಥಾನ, ಮನೆಗಳ ವರಾಂಡ ಹೀಗೆ ವಿವಿಧೆಡೆ ಹೋಗಿ ಕಲಿಸುತ್ತಿದ್ದಾರೆ. ಜಾರ್ಖಂಡ್ ರಾಜ್ಯದ ಶಿಕ್ಷಕರೊಬ್ಬರು 200 ವಿದ್ಯಾರ್ಥಿಗಳಿಗೆ ಸಾಮಾಜಿಕ ಅಂತರದಲ್ಲಿ ಕಲಿಸಲು ಮಾಡಿದ ವಿಧಾನ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ದುಮಕಾ ಎಂಬಲ್ಲಿನ ದುಮಾರ್ಥರ್ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಮನೆಯೊಂದರ ಗೋಡೆಯ ಮೇಲೆ 6 ಅಡಿ ಅಂತರದಲ್ಲಿ ಕಪ್ಪು ಬಣ್ಣ ಬಳಿದು ಅದನ್ನು ಕಪ್ಪು ಹಲಗೆಯಾಗಿ ಮಾಡಿದ್ದಾರೆ. ಮಕ್ಕಳು ಸಾಮಾಜಿಕ ಅಂತರದಲ್ಲಿ ಗೋಡೆಯ ಪಕ್ಕ ಸಾಲಾಗಿ ಕುಳಿತು ಪಾಠ ಕಲಿಯುತ್ತಾರೆ. ಶಿಕ್ಷಕ ಹೊರಗೆ ನಿಂತು ಲೌಡ್ ಸ್ಪೀಕರ್ ಬಳಸಿ ನೂರಾರು ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ಈ ಅಪರೂಪದ ಫೋಟೋವನ್ನು ಉದ್ಯಮಿ ಹರ್ಷ ಗೋಯಂಕಾ ಟ್ವೀಟ್ ಮಾಡಿದ್ದು, ಸಾಕಷ್ಟು ವೈರಲ್ ಆಗಿದೆ.