ಗುರುಗ್ರಾಮ್: ಕೈದಿಗಳಿಗೆ ಮೊಬೈಲ್ ಫೋನ್ ಮತ್ತು ಡ್ರಗ್ಸ್ ಪೂರೈಕೆ ಮಾಡಿದ ಆರೋಪದ ಮೇಲೆ ಉಪ ಜೈಲು ಅಧೀಕ್ಷಕ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಗುರುಗ್ರಾಮದ ಭೋಂಡ್ಸಿ ಜೈಲಿನ ಮೇಲೆ ಪೊಲೀಸರು ದಿಢೀರ್ ಕಾರ್ಯಾಚರಣೆ ನಡೆಸಿದ್ದಾರೆ. ದಾಳಿಯ ಸಂದರ್ಭದಲ್ಲಿ ಕೈದಿಗಳ ಬಳಿ ಇದ್ದ ಮಾದಕ ದ್ರವ್ಯ ಹಾಗೂ ಮೊಬೈಲ್ ಫೋನ್, ಸಿಮ್ ಕಾರ್ಡ್ ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಜೈಲಿನಲ್ಲಿದ್ದ ಕೈದಿಯೊಬ್ಬ ಹಣಕ್ಕಾಗಿ ಬೇಡಿಕೆ ಇಟ್ಟಿರುವ ಬಗ್ಗೆ ಮಾಹಿತಿ ಪಡೆದುಕೊಂಡ ಪೊಲೀಸರು ದಿಢೀರ್ ದಾಳಿ ನಡೆಸಿದ್ದು ಈ ವೇಳೆ ಉಪ ಜೈಲು ಅಧೀಕ್ಷಕರೇ ಕೈದಿಗಳಿಗೆ ಮೊಬೈಲ್ ಫೋನ್, ಸಿಮ್ ಕಾರ್ಡ್, ಡ್ರಗ್ಸ್ ಪೂರೈಕೆ ಮಾಡಿ ಅವರಿಂದ ಹಣವನ್ನು ಪಡೆದುಕೊಳ್ಳುತ್ತಿರುವುದು ಗೊತ್ತಾಗಿದೆ.
ಜೈಲು ಅಧೀಕ್ಷಕ ಸೇರಿ ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು ಅವರ ನಿವಾಸದ ಮೇಲೆ ದಾಳಿ ನಡೆಸಿ 11 4ಜಿ ಸಿಮ್ ಗಳು 230 ಗ್ರಾಂ ಮಾದಕದ್ರವ್ಯ ವಶಕ್ಕೆ ಪಡೆದಿದ್ದಾರೆ. ಕೈದಿಗಳು ಮತ್ತು ಆರೋಪಿಗಳ ಬಳಿಯಿಂದ 10 ಲಕ್ಷ ರೂಪಾಯಿ ಮಾದಕದ್ರವ್ಯ ಜಪ್ತಿ ಮಾಡಲಾಗಿದೆ.