ದಿನನಿತ್ಯ ಓಡಾಡುವ ರಸ್ತೆಯಲ್ಲಿ ಸಿಂಹವೊಂದು ಬೀದಿನಾಯಿಯಂತೆ ಓಡಾಡಿದರೆ ಏನಾಗಬೇಡ.
ವಿಷಯವನ್ನು ಕಣ್ಣಾರೆ ಕಂಡ ಮೇಲೂ, ಕಿವಿಯಾರೆ ಕೇಳಿದ ಮೇಲೂ ರಸ್ತೆಗೆ ಬರುವುದಿರಲಿ, ಮನೆ ಬಿಟ್ಟು ಹೊರಗೆ ಬರಲು ಸಾಧ್ಯವೆ ?
ಗುಜರಾತ್ ನ ರಾಜಕೋಟ್ ನಲ್ಲಿನ ಅಮ್ರೇಲಿ ಜಿಲ್ಲೆ ರಾಜುಲ ತಾಲೂಕಿನಲ್ಲಿರುವ ಅಲ್ಟ್ರಾ ಟೆಕ್ ಸಿಮೆಂಟ್ ಕಾರ್ಖಾನೆಯ ಕಾರ್ಮಿಕರು ವಾಸಿಸುತ್ತಿರುವ ಕಾಲೋನಿಯಲ್ಲಿ ಸಿಂಹ ಕಾಣಿಸಿಕೊಂಡಿದೆ.
ದೂರದಿಂದಲೇ ಇದರ ನಡಿಗೆಯನ್ನು ಒಂದಿಷ್ಟು ಮಂದಿ ವಿಡಿಯೋ ಮಾಡಿದ್ದು, ಕೆಲವರು ಫೋಟೋಗಳನ್ನು ಕ್ಲಿಕ್ಕಿಸಿದ್ದಾರೆ.
ವಿಡಿಯೋ ಮಾಡಿದಾತ ತನ್ನ ಅನುಭವ ಹಂಚಿಕೊಂಡಿದ್ದು, ಈಗಲೂ ಸಿಂಹ ನಡಿಗೆ ನೆನಪಿಸಿಕೊಂಡರೆ ನಡುಕ ಬರುತ್ತದೆ. ರಾತ್ರಿ ವೇಳೆ ರಸ್ತೆಯಲ್ಲಿ ರಾಜಾರೋಷವಾಗಿ ನಡೆದಾಡುತ್ತಿದ್ದ ಸಿಂಹದಿಂದ ಕಾಲೋನಿಯ ಜನರು ಗಾಬರಿಯಾಗಿದ್ದರು.
ಆದರೆ, ಇಲ್ಲಿನ ವಸತಿ ಪ್ರದೇಶಗಳಲ್ಲಿ ಸಿಂಹ ಕಾಣಿಸಿಕೊಳ್ಳುವುದು ಹೊಸತೇನಲ್ಲ. ಪಕ್ಕದಲ್ಲೇ ಅರಣ್ಯ ಪ್ರದೇಶ ಇರುವುದರಿಂದ ಇತ್ತೀಚೆಗಷ್ಟೆ ಮೂರು ಸಿಂಹಗಳು ಒಟ್ಟೊಟ್ಟಿಗೆ ಕಾಣಿಸಿಕೊಂಡಿದ್ದವು.
ಇದರ ನಡುವೆ ಅಮ್ರೇಲಿ ಜಿಲ್ಲೆಯ ಧಾರಿ ತಾಲೂಕಿನಲ್ಲಿ ಕೂಡ 8 ಸಿಂಹಗಳು ಓಡಾಡಿದ ವಿಡಿಯೋ ಕೂಡ ವೈರಲ್ ಆಗಿದ್ದು, ಅತಂಕಕ್ಕೆ ಕಾರಣವಾಗಿದೆ.
ಅಸಲಿಗೆ ಮನುಷ್ಯರು ಸಿಂಹಗಳ ಬೇಟೆ ಅಲ್ಲವೇ ಅಲ್ಲ. ಸುಖಾಸುಮ್ಮನೆ ಮನುಷ್ಯರ ಮೇಲೆ ಅವು ದಾಳಿ ನಡೆಸುವುದಿಲ್ಲ. ಅವುಗಳಿಗೆ ತೊಂದರೆ ಕೊಡದೆ ಎಚ್ಚರಿಕೆಯಿಂದ ಇರಬೇಕು ಎಂದು ಅರಣ್ಯಾಧಿಕಾರಿಯೊಬ್ಬರು ಸಲಹೆ ನೀಡಿದ್ದಾರೆ.