ಅಕ್ರಮ ಸಂಬಂಧದಿಂದ ಜನಿಸಿ ಅನಾಥಾಶ್ರಮದಲ್ಲಿದ್ದ ಹೆಣ್ಣು ಮಗುವೊಂದು ಗುಜರಾತ್ ಹೈಕೋರ್ಟ್ ಆದೇಶದ ಬಳಿಕ ಇದೀಗ ತಂದೆಯ ಮಡಿಲನ್ನ ಸೇರಿದೆ. ಮಗುವಿನ ತಂದೆ ಕೊರೊನಾ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ಈ ಮಗುವನ್ನ ಅನಾಥಾಶ್ರಮದಲ್ಲಿ ಇಡಲಾಗಿತ್ತು. ಆತ ಡಿಸ್ಚಾರ್ಜ್ ಆಗಿ ಬಂದ ಬಳಿಕ ಮಗು ಸತ್ತಿದೆ ಎಂದು ಸುಳ್ಳನ್ನ ಹೇಳಲಾಗಿತ್ತು.
ಗುಜರಾತ್ನ ಖೇದಾ ನಗರದ 35 ವರ್ಷದ ನಿವಾಸಿ ಅಹಮದಾಬಾದ್ನ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ, ಇವರಿಬ್ಬರಿಗೆ ಜುಲೈನಲ್ಲಿ ಹೆಣ್ಣು ಮಗು ಕೂಡ ಜನಿಸಿತ್ತು. ಈ ಮಗುವನ್ನ ಆತನಿಗೆ ನೀಡಲು ಮಹಿಳೆ ಒಪ್ಪಿಗೆಯನ್ನೂ ನೀಡಿದ್ದಳು.
ಹೀಗಾಗಿ ಖೇದಾ ನಿವಾಸಿ ಹಾಗೂ ಮತ್ತಾತನ ಪತ್ನಿ ಈ ಮಗುವನ್ನ ಮನೆಗೆ ತಂದಿದ್ದರು. ಆದರೆ ಆ ವ್ಯಕ್ತಿಯ ತಾಯಿಗೆ ಮಗು ಮನೆಗೆ ಬರೋದು ಸುತಾರಾಂ ಇಷ್ಟವಿರಲಿಲ್ಲ. ಮಗು ಮನೆಗೆ ಬಂದ ಕೇವಲ 5 ದಿನದಲ್ಲಿ ಆತ ಕೊರೊನಾ ಸೋಂಕಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ. 2 ವಾರ ಬಿಟ್ಟು ಮನೆಗೆ ವಾಪಸ್ಸಾದಾಗ ಆತನ ತಾಯಿ ಮಗು ಅನಾರೋಗ್ಯದಿಂದ ಸತ್ತು ಹೋಗಿದೆ ಎಂದು ಸುಳ್ಳು ಹೇಳಿದ್ದಳು. ಆದರೆ ತಾಯಿಯ ಮಾತನ್ನ ನಂಬದ ಮಗುವಿನ ತಂದೆ ಮಗಳಿಗಾಗಿ ಹುಡುಕಾಟ ಶುರು ಮಾಡಿದ್ದ. ಈ ವೇಳೆ ಆತನಿಗೆ ತನ್ನ ಮಗು ಅಹಮದಾಬಾದ್ನ ಮಹಿಪಾತ್ರಂ ರೂಪ್ರಂ ಆಶ್ರಮದಲ್ಲಿ ಇದೆ ಎಂಬ ವಿಚಾರ ತಿಳಿದು ಬಂದಿದೆ.
ಆದರೆ ಮಗುವನ್ನ ಈತನ ಕಸ್ಟಡಿಗೆ ಒಪ್ಪಿಸಬೇಕು ಅಂದರೆ ಪೊಲೀಸರ ಆದೇಶ ಬೇಕೆಂದು ಆಶ್ರಮದ ಅಧಿಕಾರಿಗಳು ತಾಕೀತು ಮಾಡಿದ್ದರು. ಪೊಲೀಸರು ವ್ಯಕ್ತಿಯ ಪರವಾಗಿ ನಿಲ್ಲೋಕೆ ನಿರಾಕರಿಸಿದ್ದಾರೆ. ಹೀಗಾಗಿ ಸೀದಾ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ ಮಗುವಿನ ತಂದೆ ಕೊನೆಗೂ ತನ್ನ ಮಗುವನ್ನ ಪಡೆಯುವಲ್ಲಿ ಯಶಸ್ವಿಯಾಗಿದ್ದಾನೆ.