ಗುಜರಾತ್ ನ ನವಸಾರಿ ಜಿಲ್ಲೆಯಲ್ಲಿ 12 ವರ್ಷದ ಬಾಲಕಿ ಮೇಲೆ ಮೂವರು ಅಪ್ರಾಪ್ತ ಸೋದರ ಸಂಬಂಧಿಗಳು ಅತ್ಯಾಚಾರವೆಸಗಿದ್ದಾರೆ. 5 ತಿಂಗಳ ಅವಧಿಯಲ್ಲಿ ನಿರಂತರ ಅತ್ಯಾಚಾರಕ್ಕೆ ಒಳಗಾದ ಬಾಲಕಿ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಾಳೆ.
ಹೊಟ್ಟೆ ನೋವು ಕಾಣಿಸಿಕೊಂಡ ಬಾಲಕಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ ತಾಯಿಗೆ ಈ ವಿಷಯ ಗೊತ್ತಾಗಿದೆ. ಬಾಲಕಿ ಪರೀಕ್ಷಿಸಿದ ವೈದ್ಯರು 4 ತಿಂಗಳ ಗರ್ಭಿಣಿಯಾಗಿದ್ದಾಳೆ ಎಂದು ತಿಳಿಸಿದ್ದು, ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಬುಧವಾರ ರಾತ್ರಿ ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಗುರುವಾರ ಮಧ್ಯಾಹ್ನ ಬಾಲಕಿ ಮತ್ತು ಆಕೆಯ ಪೋಷಕರಿಂದ ಪೊಲೀಸರು ಹೇಳಿಕೆ ಪಡೆದುಕೊಂಡಿದ್ದಾರೆ. ಮೂವರು ಬಾಲಕರು ಅತ್ಯಾಚಾರ ಎಸಗಿ ಪರಾರಿಯಾಗಿದ್ದಾರೆ. ಬಾಲಾಪರಾಧಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕೃಷಿ ಕಾರ್ಮಿಕನ ಮಗಳಾಗಿರುವ ಹುಡುಗಿ ಮನೆಯಲ್ಲಿ ಒಬ್ಬಂಟಿಯಾಗಿದ್ದ ವೇಳೆಯಲ್ಲಿ ಸಂಬಂಧಿಯೊಬ್ಬ ಅತ್ಯಾಚಾರ ಎಸಗಿದ್ದಾನೆ. ಬಳಿಕ ತನ್ನ ಇಬ್ಬರು ಸೋದರ ಸಂಬಂಧಿಗಳಿಗೆ ಈ ವಿಷಯ ತಿಳಿಸಿದ್ದು, ನಂತರದಲ್ಲಿ ಹುಡುಗಿ ತಾಯಿಗೆ ವಿಷಯ ತಿಳಿಸುವ ಬೆದರಿಕೆ ಹಾಕಿದ ಮೂವರು ಸೋದರ ಸಂಬಂಧಿಗಳು ಆಕೆಯ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದಾರೆ. ಎಲ್ಲಾ ಆರೋಪಿಗಳು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ ಎಂದು ಹೇಳಲಾಗಿದೆ.