ವೈದ್ಯಕೀಯ ಶಿಬಿರಕ್ಕೆಂದು ಅಮೆರಿಕದಿಂದ ದೆಹಲಿಗೆ ಆಗಮಿಸಿದ್ದ ಭಾರತೀಯ ಮೂಲದ ವೈದ್ಯರು ರೈತರ ಪ್ರತಿಭಟನೆ ಹಿನ್ನೆಲೆ ಅಮೆರಿಕಕ್ಕೆ ವಾಪಸ್ಸಾಗುವ ಯೋಜನೆಯನ್ನ ಮುಂದೂಡಿದ್ದಾರೆ.
ಕೃಷಿ ಕಾನೂನುಗಳನ್ನ ವಿರೋಧಿಸಿ ಸಾವಿರಾರು ರೈತರು ದೆಹಲಿ ಟಿಕ್ರಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹೀಗಾಗಿ ರೈತರಿಗೆ ನೆರವಾಗಲು ಇಚ್ಚಿಸಿದ್ದ ಅಮೆರಿಕ ವೈದ್ಯರ ತಂಡ ತಮ್ಮ ಶಿಬಿರವನ್ನ ಮುಂದುವರಿಸಿದ್ದಾರೆ.
ಪ್ರತಿ ವರ್ಷ ನಾವು ಭಾರತಕ್ಕೆ ಬಂದು ವೈದ್ಯಕೀಯ ಶಿಬಿರವನ್ನ ನಡೆಸುತ್ತೇವೆ. ಆದರೆ ಈ ವರ್ಷ ನಮ್ಮ ಶಿಬಿರದ ಅವಶ್ಯಕತೆ ಈ ದೇಶಕ್ಕೆ ಹೆಚ್ಚಾಗಿದೆ. ನಾವು ಮೂರು ತಿಂಗಳ ಹಿಂದೆಯೇ ಭಾರತಕ್ಕೆ ಬಂದಿದ್ದೆವು. ಆದರೆ ಇದೀಗ ರೈತರಿಗೆ ನೆರವಾಗಲು ಶಿಬಿರ ಮುಂದುವರಿಸಿದ್ದೇವೆ ಅಂತಾ ಹೃದ್ರೋಗ ತಜ್ಞ ಸ್ವೈಮನ್ ಸಿಂಗ್ ಹೇಳಿದ್ರು.
ಕಳೆದ ನಾಲ್ಕು ವರ್ಷಗಳಿಂದ ಅಮೆರಿಕದಲ್ಲಿ ವೈದ್ಯರಾಗಿರುವ ಸಿಂಗ್ ಪ್ರಕಾರ ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಬಹುತೇಕ ರೈತರು ಒತ್ತಡದಿಂದ ಬಳಲುತ್ತಿದ್ದಾರೆ. ರಕ್ತದೊತ್ತಡ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನ ಕುಗ್ಗಿಸುತ್ತೆ. ಹೀಗಾಗಿಯೇ ಇಲ್ಲಿರುವ ರೈತರು ಅತಿಸಾರ, ಜ್ವರದಿಂದ ಬಳಲುತ್ತಿದ್ದಾರೆ. ಇಂತವರಿಗೆ ಕೊರೊನಾ ವೈರಸ್ ತಾಕುವ ಅಪಾಯ ಹೆಚ್ಚು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.