ಹಿಂದೂ ಧರ್ಮದ ಪ್ರಕಾರದಂತೆ ಮದುವೆಯಾಗೋದು ಅಂದರೆ ಮಂಗಳ ಸೂತ್ರಕ್ಕೆ ತುಂಬಾನೇ ಮಹತ್ವವಿದೆ. ಈ ಮಂಗಳ ಸೂತ್ರವನ್ನ ವರನಾದವನು ವಧುವಿನ ಕೊರಳಿಗೆ ಕಟ್ಟುತ್ತಾರೆ. ಇವೆಲ್ಲವೂ ಎಲ್ಲರಿಗೂ ತಿಳಿದಿರುವ ವಿಷಯವೇ.
ಆದರೆ ಶಾರ್ದೂಲ್ ಕದಮ್ ಎಂಬ ವ್ಯಕ್ತಿ ಕೇವಲ ತಮ್ಮ ಪತ್ನಿಗೆ ಮಂಗಳ ಸೂತ್ರವನ್ನ ತೊಡಿಸೋದ್ರ ಜೊತೆಗೆ ತಾವು ಕೂಡ ತಮ್ಮ ಸಂಗಾತಿಯಿಂದ ಮಂಗಳ ಸೂತ್ರವನ್ನ ಕೊರಳಿಗೆ ಕಟ್ಟಿಸಿಕೊಂಡಿದ್ದಾರೆ. ಈ ಮೂಲಕ ಹಿಂದೂ ಸಂಪ್ರದಾಯದ ಮಂಗಳಸೂತ್ರಕ್ಕೆ ಒಂದು ಹೊಸ ಅರ್ಥವನ್ನ ನೀಡಿದ್ದು, ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ಸುದ್ದಿಯಾಗುತ್ತಿದೆ.
ಸೋಶಿಯಲ್ ಮೀಡಿಯಾದಲ್ಲಿ ಶಾರ್ದೂಲ್ ತಾವೇಕೆ ಹೀಗೆ ಮಾಡಿದ್ದು ಅನ್ನೋದರ ಬಗ್ಗೆ ಕಾರಣವನ್ನೂ ನೀಡಿದ್ದಾರೆ. ಆದರೆ ಶಾರ್ದೂಲ್ರ ಈ ನಡೆಯನ್ನ ಬಹುತೇಕರು ಅಣಕಿಸಿದ್ದಾರೆ. ಶಾರ್ದೂಲ್ ತಮ್ಮ ಸಂಗಾತಿಯನ್ನ ಮೊದಲ ಬಾರಿಗೆ ತನುಜಾ ಕಾಲೇಜಿನಲ್ಲಿ ಭೇಟಿಯಾಗಿದ್ದರಂತೆ. ಇಬ್ಬರ ಪದವಿ ಶಿಕ್ಷಣ ಮುಗಿದ ಬಳಿಕ ಪ್ರೀತಿ ಮೊಳಕೆಯೊಡೆದಿತ್ತು ಎಂದು ಶಾರ್ದೂಲ್ ಹೇಳಿದ್ದಾರೆ.
ನಾವು ಅನಿರೀಕ್ಷಿತವಾಗಿ ಒಬ್ಬರನ್ನೊಬ್ಬರು ಪ್ರೀತಿಸಲು ಆರಂಭಿಸಿದ್ದೆವು. ಆಕೆ ಇನ್ಸ್ಟಾಗ್ರಾಂನಲ್ಲಿ ಹಿಮೇಶ್ ರೇಶಮಿಯಾರ ಹಾಡೊಂದನ್ನ ಶೇರ್ ಮಾಡಿ ಹಿಂಸೆಯಾಗುತ್ತಿದೆ ಎಂದು ಶೀರ್ಷಿಕೆ ನೀಡಿದ್ದಳು. ನಾನು ಇದಕ್ಕೆ ಮಹಾ ಹಿಂಸೆ ಎಂದು ಪ್ರತ್ಯುತ್ತರ ನೀಡಿದ್ದೆ. ಈ ಬಳಿಕ ಶುರುವಾದ ನಮ್ಮ ಮಾತುಕತೆ ಇದೀಗ ಮದುವೆ ತನಕ ಬಂದಿದೆ ಎಂದು ಹೇಳಿದ್ರು.
ತನುಜಾ ಹಾಗೂ ಶಾರ್ದೂಲ್ ಒಬ್ಬರನ್ನೊಬ್ಬರು ಪ್ರೀತಿಸುತ್ತಿರುವಾಗಲೇ ಶಾರ್ದೂಲ್, ತನುಜಾ ಬಳಿ ತಾವೊಬ್ಬ ಅಪ್ಪಟ ಮಹಿಳಾವಾದಿ ಎಂದು ಹೇಳಿಕೊಂಡಿದ್ದರು. ಈ ಜೋಡಿ ಕೊರೊನಾ ಮೊದಲನೆ ಅಲೆಯ ಸಂದರ್ಭದಲ್ಲೇ ಮದುವೆಯಾಗಲು ನಿಶ್ಚಯವಾಗಿದ್ದರು. ಈ ವೇಳೆಯಲ್ಲಿ ಶಾರ್ದೂಲ್ ಈ ರೀತಿ ಮಂಗಳಸೂತ್ರ ವಿನಿಮಯ ಮಾಡಿಕೊಳ್ಳೋದರ ಬಗ್ಗೆ ತನುಜಾ ಬಳಿ ಹೇಳಿಕೊಂಡಿದ್ದರು.
ಕೇವಲ ಹೆಣ್ಣು ಮಕ್ಕಳು ಮಾತ್ರ ಮಂಗಳಸೂತ್ರವನ್ನ ಏಕೆ ಧರಿಸಬೇಕು..? ಇದರಲ್ಲಿ ಯಾವುದೇ ಅರ್ಥವಿಲ್ಲ. ನಾವಿಬ್ಬರೂ ಒಂದೇ. ಹೀಗಾಗಿ ನಾನೂ ಸಹ ಮಂಗಳಸೂತ್ರವನ್ನ ಧರಿಸಲು ನಿರ್ಧರಿಸಿದೆ. ಕುಟುಂಬಸ್ಥರ ವಿರೋಧದ ನಡುವೆಯೂ ನಾವು ಮಂಗಳಸೂತ್ರ ವಿನಿಮಯ ಮಾಡಿಕೊಂಡೆವು ಎಂದು ಶಾರ್ದೂಲ್ ಹೇಳಿದ್ದಾರೆ.
ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ಅನೇಕರು ಸೀರೆಯನ್ನೂ ಉಟ್ಟುಕೊಳ್ಳಿ ಎಂದು ಕಮೆಂಟ್ ಮಾಡಿದ್ದಾರೆ. ಆದರೆ ನಾವು ಇಂತಹ ಕುಹಕಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ. ನಾನು ಹಾಗೂ ತನುಜಾ ಇಬ್ಬರೂ ಸಮಾನರು ಎಂದು ಶಾರ್ದೂಲ್ ಹೇಳಿದ್ದಾರೆ.