ನವದೆಹಲಿ: ಕೃಷಿ ಕ್ಷೇತ್ರವನ್ನು ಬಲಪಡಿಸಲು ಸರ್ಕಾರ ಮತ್ತಷ್ಟು ಪರಿಣಾಮಕಾರಿ ಕ್ರಮ ಕೈಗೊಳ್ಳುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಗುಜರಾತ್ ನಲ್ಲಿ ರೈತರಿಗಾಗಿ ನಿರಂತರ ವಿದ್ಯುತ್ ಒದಗಿಸುವ ಕಿಸಾನ್ ಸೂರ್ಯೋದಯ ಯೋಜನೆ ಸೇರಿದಂತೆ ಮೂರು ಪ್ರಮುಖ ಯೋಜನೆಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಅವರು ಮಾತನಾಡಿದ್ದಾರೆ.
ಕೃಷಿ ಕ್ಷೇತ್ರವನ್ನು ಬಲಪಡಿಸುವ ನಿಟ್ಟಿನಲ್ಲಿ ಅನೇಕ ಕ್ರಮ ಕೈಗೊಳ್ಳುತ್ತಿದ್ದು ಮುಂದಿನ ದಿನಗಳಲ್ಲಿ ರೈತರು ಸಮಸ್ಯೆ ಎದುರಿಸುವ ಪರಿಸ್ಥಿತಿ ಇಲ್ಲವಾಗುತ್ತದೆ. ರೈತರ ಆದಾಯ ದ್ವಿಗುಣ, ಉತ್ಪಾದನೆ ವೆಚ್ಚ ಮೊದಲಾದ ವಿಷಯಗಳಿಗೆ ಸಂಬಂಧಿಸಿದಂತೆ ಸರ್ಕಾರದಿಂದ ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಗುಜರಾತ್ ನಲ್ಲಿ ಜಾರಿಗೊಳಿಸಿರುವ ಕಿಸಾನ್ ಸೂರ್ಯೋದಯ ಯೋಜನೆಯಡಿ ಬೆಳಗ್ಗೆ 5 ಗಂಟೆಯಿಂದ ರಾತ್ರಿ 9ರವರೆಗೆ ನಿರಂತರವಾಗಿ ಕೃಷಿಗೆ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ. ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಕೃಷಿಕ್ಷೇತ್ರದ ಎಲ್ಲಾ ಸಮಸ್ಯೆಗಳನ್ನು ನಿವಾರಿಸುವುದು ಸರ್ಕಾರದ ಆದ್ಯತೆಯಾಗಿದೆ ಎಂದು ಮೋದಿ ಹೇಳಿದ್ದಾರೆ.