ನವದೆಹಲಿ: ರಾಷ್ಟ್ರೀಯ ಡಿಜಿಟಲ್ ಹೆಲ್ತ್ ಮಿಷನ್ ಆರಂಭಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಯೋಜನೆಯಡಿ ದೇಶದ ಪ್ರತಿಯೊಬ್ಬರಿಗೂ ಆರೋಗ್ಯ ಐಡಿ ಕಾರ್ಡ್ ನೀಡಲಾಗುವುದು. ಈ ಮೂಲಕ ಇ – ರೆಕಾರ್ಡ್ಸ್ ಸಂಗ್ರಹಿಸಲಾಗುವುದು.
ಆಸ್ಪತ್ರೆಗೆ ದಾಖಲಾದ ವ್ಯಕ್ತಿ ಹಿಂದೆ ಎಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಅವರಿಗೆ ಯಾವ ರೀತಿಯ ಚಿಕಿತ್ಸೆ ನೀಡಲಾಗಿದೆ. ಚಿಕಿತ್ಸೆ ನೀಡಿದ ಸಂದರ್ಭದಲ್ಲಿ ಅವರ ಆರೋಗ್ಯ ಪರಿಸ್ಥಿತಿ ಹೇಗಿತ್ತು ಎಂಬುದೆಲ್ಲವನ್ನು ಒಂದು ಬೆರಳ ತುದಿಯಲ್ಲಿ ಪಡೆದುಕೊಳ್ಳಬಹುದಾಗಿದೆ.
ರಾಷ್ಟ್ರೀಯ ಡಿಜಿಟಲ್ ಹೆಲ್ತ್ ಮಿಷನ್ ಅನ್ನು ಆರಂಭಿಸಲು ಕೇಂದ್ರ ಸರ್ಕಾರ ಚಿಂತಿಸಿದ್ದು, ಕ್ಯಾಬಿನೆಟ್ ಸಭೆಯಲ್ಲಿ ಯೋಜನೆಗೆ ಒಪ್ಪಿಗೆ ನೀಡುವ ಸಾಧ್ಯತೆ ಇದ್ದು ಸ್ವಾತಂತ್ರ್ಯದಿನದ ಭಾಷಣದ ವೇಳೆ ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಘೋಷಣೆ ಮಾಡುವ ಸಾಧ್ಯತೆ ಇದೆ.
ಜನ ಸ್ವಂತ ಇಚ್ಛೆಯಿಂದ ಕಾರ್ಡ್ ಪಡೆದುಕೊಳ್ಳಬಹುದು. ಹೆಲ್ತ್ ಗುರುತಿನ ಚೀಟಿಯಲ್ಲಿ ವ್ಯಕ್ತಿಯ ಆರೋಗ್ಯ ಮಾಹಿತಿ, ವೈದ್ಯಕೀಯ ಚಿಕಿತ್ಸೆ, ಸೌಲಭ್ಯ ಮೊದಲಾದವುಗಳು ಇರಲಿವೆ. ನಂತರ ಇ -ಫಾರ್ಮಸಿ ಮತ್ತು ಟೆಲಿಮೆಡಿಸಿನ್ ಸೇವೆಗಳನ್ನು ನೀಡಲಾಗುವುದು. ಯಾವುದೇ ವ್ಯಕ್ತಿ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ಹೋದಲ್ಲಿ ಆ ವ್ಯಕ್ತಿಯ ವಿವರಗಳು ಕೂಡಲೇ ಸಿಗುವಂತೆ ವ್ಯವಸ್ಥೆ ಮಾಡಲಾಗುವುದು. ಯೋಜನೆಗಾಗಿ 470 ಕೋಟಿ ರೂಪಾಯಿ ಕಾಯ್ದಿರಿಸಲಾಗಿದೆ ಎನ್ನಲಾಗಿದೆ.