ಕೊರೊನಾ ಮಹಾಮಾರಿಯಿಂದ ಶೀಘ್ರ ಹೊರ ಬರಲು ಸಾಧ್ಯವಿಲ್ಲವೆಂದು ಸರ್ಕಾರ ಮಹತ್ವದ ಹೇಳಿಕೆ ನೀಡಿದೆ. ಕೊರೊನಾ ವೈರಸ್ ಎಲ್ಲಿಗೂ ಹೋಗಿಲ್ಲ. ಮುಂದೆ ಮತ್ತೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಸರ್ಕಾರ ಎಚ್ಚರಿಕೆ ನೀಡಿದೆ.
ಎನ್‌ಐಟಿಐ ಆಯೋಗದ ಸದಸ್ಯ ಡಾ. ವಿ.ಕೆ. ಪಾಲ್, ಕೊರೊನಾ ಮತ್ತೆ ಅಪಾಯಕಾರಿಯಾಗುವ ಸಾಧ್ಯತೆಯಿದೆ ಎಂದಿದ್ದಾರೆ. ಮೂರನೇ ಅಲೆಯನ್ನು ನಿಭಾಯಿಸಲು ಇಂದಿನಿಂದಲೇ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದವರು ಹೇಳಿದ್ದಾರೆ.
ಎರಡನೇ ಅಲೆ ಬಗ್ಗೆ ಸರ್ಕಾರಕ್ಕೆ ಮಾಹಿತಿ ಇರಲಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಪಾಲ್, ಪದೇ ಪದೇ ಈ ಬಗ್ಗೆ ಎಚ್ಚರಿಸಿದ್ದೆವು ಎಂದಿದ್ದಾರೆ. ಕೊರೊನಾ ಎಲ್ಲಿಗೂ ಹೋಗಿಲ್ಲ. ಶೇಕಡಾ 80ರಷ್ಟು ಜನರು ಅಪಾಯದಲ್ಲಿದ್ದಾರೆ ಎಂದು ಪಾಲ್ ಹೇಳಿದ್ದಾರೆ. ಮಾರ್ಚ್ 17ರಂದೇ ಪ್ರಧಾನಿ ಮೋದಿ ಈ ಬಗ್ಗೆ ಜನರಿಗೆ ಎಚ್ಚರಿಕೆ ನೀಡಿದ್ದರು. ನಾವೆಲ್ಲ ಇದ್ರ ವಿರುದ್ಧ ಹೋರಾಟ ನಡೆಸಬೇಕೆಂದಿದ್ರು. ಮೂರನೇ ಅಲೆ ಯಾವ ಪ್ರಮಾಣದಲ್ಲಿರಲಿದೆ ಎಂಬುದನ್ನು ಅಂದಾಜು ಮಾಡುವುದು ಕಷ್ಟವೆಂದು ಪಾಲ್ ಹೇಳಿದ್ದಾರೆ.
ಕೊರೊನಾ ಸಾಂಕ್ರಾಮಿಕವು ಹಳ್ಳಿಗಳಿಗೆ ಸ್ಥಳಾಂತರಗೊಂಡಿದೆ. ಇದು ಅತ್ಯಂತ ಆತಂಕಕಾರಿ ಎಂದಿದ್ದಾರೆ. ಕೊರೊನಾ ಗಂಭೀರತೆಯನ್ನು ಅರ್ಥಮಾಡಿಕೊಳ್ಳುವಾಗ ಎಲ್ಲಾ ನಿಯಮಗಳನ್ನು ಪಾಲಿಸಬೇಕು ಎಂದಿದ್ದಾರೆ.