ನವದೆಹಲಿ: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಕುಟುಂಬಕ್ಕೆ ಸಂಬಂಧಿಸಿದ ಮೂರು ಟ್ರಸ್ಟ್ ಗಳ ವಿರುದ್ಧ ಅಕ್ರಮ ಹಣ ವರ್ಗಾವಣೆ ಆರೋಪದಡಿ ತನಿಖೆಗೆ ಕೇಂದ್ರ ಸರ್ಕಾರ ಆದೇಶಿಸಿದೆ.
ಇಂದಿರಾ ಗಾಂಧಿ ಸ್ಮಾರಕ ಟ್ರಸ್ಟ್, ರಾಜೀವ್ ಗಾಂಧಿ ಪ್ರತಿಷ್ಠಾನ, ರಾಜೀವ್ ಗಾಂಧಿ ಚಾರಿಟಬಲ್ ಟ್ರಸ್ಟ್ ಗಳಿಗೆ ವಿವಿಧ ಮೂಲಗಳಿಂದ ದೇಣಿಗೆ ಹರಿದು ಬಂದಿದ್ದು, ಈ ಬಗ್ಗೆ ತನಿಖೆ ನಡೆಸಲು ಕೇಂದ್ರ ಅಂತರ ಸಚಿವಾಲಯ ಸಮಿತಿ ರಚಿಸಿದೆ.
ವಿವಾದಿತ ಧರ್ಮಪ್ರಚಾರಕ ಜಾಕೀರ್ ನಾಯ್ಕ್ ನ ಫೌಂಡೇಶನ್ ನಿಂದ ರಾಜೀವ್ ಗಾಂಧಿ ಚಾರಿಟಬಲ್ ಟ್ರಸ್ಟ್ ಚೆಕ್ ಮೂಲಕ 50ಲಕ್ಷ ರೂ ನೀಡಿದ್ದು ಅದನ್ನು ಹಿಂತಿರುಗಿಸಲಾಗಿತ್ತು. ನೈಸರ್ಗಿಕ ವಿಕೋಪ ದುರಂತ ವೇಳೆ ಸಂತ್ರಸ್ತರಾದವರಿಗೆ ನೆರವು ನೀಡಲು ಕಾಂಗ್ರೆಸ್ ಪಕ್ಷದ ಟ್ರಸ್ಟ್ ಗಳಿಗೆ ಪ್ರಧಾನಮಂತ್ರಿ ನಿಧಿಯ ನೆರವು ಬಳಸಲಾಗಿದೆ. ಚೀನಾ ರಾಯಭಾರ ಕಚೇರಿಯಿಂದ ಗಾಂಧಿ ಟ್ರಸ್ಟ್ ಗಳಿಗೆ ದೇಣಿಗೆ ಪಡೆಯಲಾಗಿದೆ. ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ಗಾಂಧಿ ಟ್ರಸ್ಟ್ ಗಳಿಗೆ 100 ಕೋಟಿ ರೂ. ಅನುದಾನ ನೀಡಲಾಗಿದೆ.
ಆದಾಯ ತೆರಿಗೆ ವಂಚನೆ ಜೊತೆಗೆ ವಿದೇಶಿ ದೇಣಿಗೆ ನಿಯಮ ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ ತನಿಖೆ ನಡೆಸಲಾಗುವುದು. ಚೀನಾದ ರಾಯಭಾರ ಕಚೇರಿಯಿಂದ ರಾಜೀವ್ ಗಾಂಧಿ ಪ್ರತಿಷ್ಠಾನ ದೇಣಿಗೆ ಪಡೆದುಕೊಂಡಿದೆ ಎಂದು ಬಿಜೆಪಿ ಆರೋಪಿಸಿದೆ. ಇದರ ಬೆನ್ನಲ್ಲೇ ಕೇಂದ್ರ ಗೃಹ ಸಚಿವಾಲಯ ತನಿಖೆಗೆ ಮುಂದಾಗಿದೆ.
ಇದಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ್ದಾರೆ. ಇಂತಹ ಯಾವ ಬೆದರಿಕೆಗೂ ಜಗ್ಗುವುದಿಲ್ಲ. ಪ್ರಧಾನಿ ಮೋದಿ ಯಾರನ್ನು ಬೇಕಾದರೂ ಖರೀದಿಸಬಹುದು, ಬೆದರಿಸಬಹುದು ಎಂದುಕೊಂಡಿದ್ದಾರೆ. ಇಂತಹ ಬೆದರಿಕೆಗಳಿಗೆ ಜಗ್ಗುವುದಿಲ್ಲ ಎಂದು ಹೇಳಿದ್ದಾರೆ.