ನವದೆಹಲಿ: ಸೆಪ್ಟೆಂಬರ್ 21 ರಿಂದ 9 ರಿಂದ 12 ನೇ ತರಗತಿಗಳಿಗೆ ಶಾಲೆಗಳನ್ನು ಭಾಗಶಃ ಪುನರಾರಂಭಿಸಲು ಸರ್ಕಾರ ಮಾರ್ಗಸೂಚಿ ಹೊರಡಿಸಿದೆ.
9 ರಿಂದ 12 ನೇ ತರಗತಿಗಳಿಗೆ ಸ್ವಯಂಪ್ರೇರಿತ ಆಧಾರದ ಮೇಲೆ ಶಾಲೆಗಳನ್ನು ಪುನರಾರಂಭಿಸಲು ಆರೋಗ್ಯ ಸಚಿವಾಲಯದಿಂದ ಮಾರ್ಗಸೂಚಿ ಹೊರಡಿಸಲಾಗಿದೆ. ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಕರಿಂದ ಮಾರ್ಗದರ್ಶನ ಪಡೆಯಲು ಅನುವು ಮಾಡಿಕೊಡಲಾಗಿದೆ.
ವಿದ್ಯಾರ್ಥಿಗಳಿಗೆ ಶಾಲೆಗೆ ಬಂದು ಹೋಗಲು ಶಾಲೆಗಳಲ್ಲಿ ನಿರ್ದಿಷ್ಟ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ತಿಳಿಸಲಾಗಿದೆ. ಕೊರೊನಾ ಸಾಂಕ್ರಾಮಿಕ ರೋಗದ ಅಪಾಯ ಕಡಿಮೆ ಮಾಡಲು ಅನುಸರಿಸಬೇಕಾದ ಸರಳ ಆರೋಗ್ಯ ಕ್ರಮಗಳನ್ನು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಶಾಲೆಗೆ ಬರುವ ಶಿಕ್ಷಕರು, ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಮಾರ್ಗಸೂಚಿ ಅನುಸಾರ 9 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳು ತಮ್ಮ ಶಿಕ್ಷಕರಿಂದ ಅಗತ್ಯವಾದ ಮಾರ್ಗದರ್ಶನ ಪಡೆಯಲು ಅವಕಾಶ ನೀಡಲಾಗಿದೆ. ಇದಕ್ಕಾಗಿ ವಿದ್ಯಾರ್ಥಿಗಳ ಪೋಷಕರ ಮತ್ತು ಪಾಲಕರ ಲಿಖಿತವಾದ ಒಪ್ಪಿಗೆ ಪಡೆಯಬೇಕಿದೆ.
ಸೆಪ್ಟಂಬರ್ 1 ರಿಂದ ಜಾರಿಯಲ್ಲಿರುವ ಅನ್ಲಾಕ್ -4 ಚಟುವಟಿಕೆಗಳನ್ನು ಪುನರಾರಂಭಿಸಲು ಅವಕಾಶ ನೀಡಲಾಗಿದೆ. ಮಾರ್ಗಸೂಚಿಯನ್ವಯ ಸೆಪ್ಟೆಂಬರ್ 21 ರಿಂದ 9 ರಿಂದ 12 ನೇ ತರಗತಿ ಮಕ್ಕಳು ಶಾಲೆಗಳಲ್ಲಿ ಶಿಕ್ಷಕರನ್ನು ಭೇಟಿ ಮಾಡಿ ಮಾರ್ಗದರ್ಶನ ಪಡೆಯಬಹುದಾಗಿದೆ ಎಂದು ಹೇಳಲಾಗಿದೆ.