
ನವದೆಹಲಿ: ಕೆಜಿಗಟ್ಟಲೆ ಚಿನ್ನಾಭರಣ ಧರಿಸುತ್ತಿದ್ದ ಗೋಲ್ಡನ್ ಬಾಬಾ ಖ್ಯಾತಿಯ ಸುಧೀರ್ ಕುಮಾರ್ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
58 ವರ್ಷದ ಸುಧೀರ್ ಕುಮಾರ್ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಕ್ಯಾನ್ಸರ್, ಮಧುಮೇಹ, ಥೈರಾಯಿಡ್ ಸಮಸ್ಯೆ ಮೊದಲಾದ ಕಾಯಿಲೆಯಿಂದ ಬಳಲುತ್ತಿದ್ದ ಮಕ್ಕರ್ ಅಲಿಯಾಸ್ ಗೋಲ್ಡನ್ ಬಾಬಾ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಉತ್ತರ ಪ್ರದೇಶದ ಗಾಜಿಯಾಬಾದ್ ಮೂಲದ ಅವರು ದೆಹಲಿಯ ಗಾಂಧಿನಗರ್ ನಲ್ಲಿ ವಾಸವಾಗಿದ್ದರು. ಬಟ್ಟೆ ವ್ಯಾಪಾರಿಯಾಗಿದ್ದ ಅವರು ನಂತರದಲ್ಲಿ ಸ್ವಾಮೀಜಿಯಾಗಿ ದೀಕ್ಷೆ ಪಡೆದು ಆಶ್ರಮ ನಡೆಸುತ್ತಿದ್ದರು. ಅವರಿಗೆ ಚಿನ್ನದ ಮೇಲೆ ಹೆಚ್ಚಿನ ವ್ಯಾಮೋಹವಿತ್ತು. ಮೈಮೇಲೆ ಸುಮಾರು 20 ಕೆಜಿಯಷ್ಟು ಬಂಗಾರದ ಆಭರಣ, ದುಬಾರಿ ಬೆಲೆಯ ವಾಚ್ ಗಳನ್ನು ಧರಿಸುತ್ತಿದ್ದರು. ಈ ಮೂಲಕವೇ ಗೋಲ್ಡನ್ ಬಾಬಾ ಎಂದು ಖ್ಯಾತರಾಗಿದ್ದ ಅವರ ಮೇಲೆ ಕೊಲೆ ಬೆದರಿಕೆ, ಅಪಹರಣ, ದರೋಡೆ ಸೇರಿದಂತೆ ಹಲವು ಕ್ರಿಮಿನಲ್ ಕೇಸ್ ಗಳು ಇದ್ದವು.