ಲಖ್ನೋ: ಉತ್ತರಪ್ರದೇಶ ಮೀರತ್ ಪೊಲೀಸರು ಲೈಂಗಿಕಕ್ರಿಯೆಗೆ ನಿರಾಕರಿಸಿದ ಯುವತಿಯ ಅಶ್ಲೀಲ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಕಾಮುಕನನ್ನು ಬಂಧಿಸಿದ್ದಾರೆ.
ಆರೋಪಿ ತನ್ನ ಹೆಸರನ್ನು ಸುಳ್ಳು ಹೇಳಿದ್ದಲ್ಲದೇ, ನಕಲಿ ದಾಖಲೆ ಸೃಷ್ಠಿಸಿರುವುದು ತನಿಖೆಯಲ್ಲಿ ಗೊತ್ತಾಗಿದೆ. ವಾಸಿಂ ಅಹಮ್ಮದ್ ಎಂಬಾತನೇ ಇಂತಹ ಕೃತ್ಯವೆಸಗಿದ ಆರೋಪಿ. ಈತ ದಿನೇಶ್ ರಾವತ್ ಎಂಬ ಹೆಸರಿನಲ್ಲಿ ಫೇಸ್ಬುಕ್ ಖಾತೆ ತೆರೆದಿದ್ದು ಆಧಾರ್ ಕಾರ್ಡ್ ಸೇರಿ ಹಲವು ದಾಖಲೆಗಳನ್ನು ಹೊಂದಿದ್ದ. ಹಾಪುಡ ಯುವತಿಯನ್ನು ಪರಿಚಯಿಸಿಕೊಂಡು ಪ್ರೀತಿಸುವ ನಾಟಕವಾಡಿ ಆಕೆಯನ್ನು ದೈಹಿಕವಾಗಿ ಬಳಸಿಕೊಂಡಿದ್ದ.
ನಂತರದಲ್ಲಿ ಯುವತಿ ದೈಹಿಕ ಸಂಪರ್ಕ ಹೊಂದಲು ಹಿಂದೇಟು ಹಾಕಿದ್ದು ಮದುವೆ ಮಾಡಿಕೊಳ್ಳುವಂತೆ ಹೇಳಿದ್ದಾಳೆ. ಆದರೆ, ಮದುವೆಯಾಗಲು ನಿರಾಕರಿಸಿ ಲೈಂಗಿಕ ಕ್ರಿಯೆಗೆ ಬಲವಂತ ಮಾಡಿದ ಆರೋಪಿ ಆಕೆಯ ಅಶ್ಲೀಲ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ.
ನೊಂದ ಯುವತಿ ಪೊಲೀಸರಿಗೆ ದೂರು ನೀಡಿದ್ದು, ವಾಸೀಂ ಅಹಮ್ಮದ್ ಗೆ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳು ಇರುವುದು ಗೊತ್ತಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆತನನ್ನು ಬಂಧಿಸಿದ್ದಾರೆ.