ಮುಂಬೈನ ಬೀದಿಬದಿ ವಾಸಿಸುತ್ತಿದ್ದ ಅಶ್ಮಾ ಶೇಕ್ ಎಂಬಾಕೆಗೆ ಮನೆ, ಕೆಲಸ ಕೊಡುವ ಭರವಸೆಯನ್ನು ಸ್ಥಳೀಯ ಶಾಸಕರು ನೀಡಿದ್ದಾರೆ.
ಇದಕ್ಕೆ ಕಾರಣವೂ ಇಲ್ಲದಿಲ್ಲ. 17 ವರ್ಷದ ಈ ಬಡಪ್ರತಿಭೆ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಶೇ.40 ರಷ್ಟು ಅಂಕ ಪಡೆದು ಉತ್ತೀರ್ಣಳಾಗಿದ್ದಾಳೆ.
ಈಕೆಯನ್ನು ಮನೆ ಪಾಠಕ್ಕೆ ಸೇರಿಸಿದ್ದ ತಂದೆ, ಹಗಲು-ರಾತ್ರಿ ನಿಂಬೆಹಣ್ಣಿನ ಜ್ಯೂಸ್ ಮಾಡಿ ಮಾರುತ್ತಿದ್ದರು. ಆದರೂ ಮಕ್ಕಳ ವಿದ್ಯಾಭ್ಯಾಸ, ಸಂಸಾರ ತೂಗಿಸಲು ಕಷ್ಟವೇ. ಲಾಕ್ ಡೌನ್ ಪರಿಣಾಮದಿಂದ ನಿಂಬೆಹಣ್ಣು ಜ್ಯೂಸ್ ಮಾರಲಾಗಿಲ್ಲ. ಮಗಳಿಗೆ ಮನೆ ಪಾಠವೂ ಇಲ್ಲ.
ಆಜಾದ್ ಮೈದಾನದಲ್ಲಿ ಸಣ್ಣ ಗುಡಿಸಲಿನಂತಹ ಜಾಗದಲ್ಲಿ ಪೋಷಕರು ಹಾಗೂ ಸಹೋದರನೊಂದಿಗೆ ವಾಸಿಸುತ್ತಿರುವ ಅಶ್ಮಾ, ಹಗಲಿನಲ್ಲಿ ಸಂಚಾರ ದಟ್ಟಣೆ, ಹಾರ್ನ್ ಶಬ್ದಗಳಿಂದಾಗಿ ಓದುವುದೇ ಕಷ್ಟ. ಹೀಗಾಗಿ ಪ್ರತಿದಿನ ರಾತ್ರಿ ಬೀದಿ ದೀಪದ ಬೆಳಕಿನಡಿಯೇ ಓದುತ್ತಿದ್ದಾಳೆ.
ಇಷ್ಟಾದರೂ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಶೇ.40 ರಷ್ಟು ಅಂಕ ಗಳಿಸಿ, ಅನೇಕರಿಗೆ ಸ್ಫೂರ್ತಿಯಾಗಿರುವ ಅಶ್ಮಾಳ ಪ್ರತಿಭೆ ಗಮನಿಸಿದ ಶಿವಸೇನಾ ಶಾಸಕ ಪ್ರತಾಪ್ ಸರ್ ನಾಯಕ್ ಅವರು ಆಕೆಗೆ ಮನೆ ಕೊಟ್ಟು, ಪಾರ್ಟ್ ಟೈಮ್ ಕೆಲಸ ಕೂಡ ಕೊಡಿಸುವ ಭರವಸೆ ನೀಡಿದ್ದಾರೆ.