ಉತ್ತರ ಪ್ರದೇಶದ ಜಾನ್ಸಿ ನಗರದಲ್ಲಿ ಅಪ್ರಾಪ್ತ ವಯಸ್ಸಿನ ಹುಡುಗಿ ಪ್ರಿಯಕರನೊಂದಿಗೆ ಸೇರಿ ಅಜ್ಜಿಯನ್ನೇ ಕೊಲೆ ಮಾಡಿದ್ದಾಳೆ.
63 ವರ್ಷದ ಮುಮ್ತಾಜ್ ಕೊಲೆಯಾದ ವೃದ್ಧೆ. ಪ್ರೇಮ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜೂನ್ 11ರಂದು ಕೊಲೆಯಾಗಿದ್ದು ಕೊಲೆ ರಹಸ್ಯವನ್ನು ಬಯಲಿಗೆಳೆದ ಪೊಲೀಸರು ಅಪ್ರಾಪ್ತ ಮೊಮ್ಮಗಳು ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ.
ಬಾಲಕಿಯ ತಂದೆ ಸಾವನ್ನಪ್ಪಿದ್ದು ತಾಯಿ ಬೇರೆ ವ್ಯಕ್ತಿಯೊಂದಿಗೆ ಓಡಿ ಹೋಗಿದ್ದಾಳೆ. ಅಜ್ಜ-ಅಜ್ಜಿಯ ಮನೆಯಲ್ಲಿ ವಾಸವಾಗಿದ್ದ ಬಾಲಕಿ ಯುವಕನನ್ನು ಪ್ರೀತಿಸುತ್ತಿದ್ದಳು. ಪ್ರತಿದಿನ ರಾತ್ರಿ ಅಜ್ಜ, ಅಜ್ಜಿಗೆ ಊಟದಲ್ಲಿ ನಿದ್ದೆ ಮಾತ್ರೆ ಕೊಡುತ್ತಿದ್ದ ಬಾಲಕಿ ಇಬ್ಬರು ಮಲಗುತ್ತಿದ್ದಂತೆ ತಡರಾತ್ರಿ ಪ್ರಿಯಕರನನ್ನು ಕರೆಸಿಕೊಂಡು ಲೈಂಗಿಕ ಕ್ರಿಯೆ ನಡೆಸುತ್ತಿದ್ದಳು.
ಮುಮ್ತಾಜ್ ಒಂದು ದಿನ ಕಡಿಮೆ ಊಟ ಮಾಡಿ ಸರಿಯಾಗಿ ನಿದ್ದೆ ಮಾಡಿಲ್ಲ. ಈ ವೇಳೆ ಮೊಮ್ಮಗಳ ರೂಮ್ ನಿಂದ ಬಂದ ಶಬ್ದ ಕೇಳಿ ಹೋಗಿ ನೋಡಿದಾಗ ಪ್ರಿಯಕರನೊಂದಿಗೆ ಮೊಮ್ಮಗಳು ಲೈಂಗಿಕ ಕ್ರಿಯೆ ನಡೆಸುತ್ತಿದ್ದ ದೃಶ್ಯ ಕಣ್ಣಿಗೆ ಬಿದ್ದಿದೆ. ಭಯಗೊಂಡ ಇಬ್ಬರು ವೃದ್ಧೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ದರೋಡೆಕೋರರ ಕೃತ್ಯವೆಂದು ಬಿಂಬಿಸಲು ಅಜ್ಜಿಯ ಸರ ದೋಚಿದ್ದಾರೆ.
ದರೋಡೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಬಾಲಕಿಯ ಮೊಬೈಲ್ ಕಾಲ್ ಡೀಟೇಲ್ಸ್ ಪರಿಶೀಲಿಸಿದಾಗ ಪ್ರಿಯಕರನಿಗೆ ಮಧ್ಯರಾತ್ರಿ ಫೋನ್ ಮಾಡಿರುವುದು ಗೊತ್ತಾಗಿದೆ. ಅವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬೆಳಕಿಗೆ ಬಂದಿದೆ. ಪ್ರಿಯಕರ ತಂದುಕೊಡುತ್ತಿದ್ದ ನಿದ್ದೆ ಮಾತ್ರೆಗಳನ್ನು ಅಜ್ಜ, ಅಜ್ಜಿಗೆ ಊಟದಲ್ಲಿ ಬೆರೆಸಿ ಕೊಟ್ಟು ತಡರಾತ್ರಿ ಬಾಲಕಿ, ಪ್ರಿಯಕರ ಇಬ್ಬರು ರೂಮ್ ನಲ್ಲಿ ಲೈಂಗಿಕ ಕ್ರಿಯೆ ನಡೆಸುತ್ತಿದ್ದರು. ಇದನ್ನು ಅಜ್ಜಿ ನೋಡಿದ್ದರಿಂದ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.