ಭಾರತದಲ್ಲಿ ಇತರೆ ಹಬ್ಬಗಳಿಗಿಂತ ಭಿನ್ನವಾಗಿ, ವೈಭವದಿಂದ ನಡೆಯುವ ಹಬ್ಬವೆಂದರೆ ಗಣೇಶ ಚತುರ್ಥಿ. ಮೂರು ದಿನದಿಂದ ತಿಂಗಳ ತನಕ ಮನೆ, ಪೆಂಡಾಲ್ ಗಳಲ್ಲಿ ಗಣೇಶನನ್ನು ಪ್ರತಿಷ್ಠಾಪನೆ ಮಾಡಿ ಸಂಭ್ರಮಿಸುವುದು ಸಾಮಾನ್ಯ. ಅದರೆ ಈ ಬಾರಿ ಕೊರೊನಾದಿಂದ ಈ ವೈಭವ ಮಾಯವಾಗಿದ್ದು, ಅನೇಕ ಭಾಗದಲ್ಲಿ ಕೇವಲ ಒಂದೂವರೆ ದಿನಕ್ಕೆ ಗಣೇಶ ಕೂರಿಸುವುದನ್ನು ಸೀಮಿತಗೊಳಿಸಲಾಗಿದೆ.
ಮಹಾರಾಷ್ಟ್ರದ ಮುಂಬೈ, ದೆಹಲಿ ಸೇರಿದಂತೆ ದೇಶದ ಹಲವು ಭಾಗದಲ್ಲಿ ಭಾರಿ ವೈಭವದಿಂದ ಗಣೇಶನ ಹಬ್ಬ ಆಚರಿಸಲಾಗುತ್ತಿತ್ತು. ಆದರೆ ಈ ಬಾರಿ ಆನ್‌ಲೈನ್ ಮೊರೆ ಹೋಗುವ ಸಾಧ್ಯತೆಯಿದೆ ಎನ್ನುವ ಮಾತುಗಳು ಕೇಳಿಬಂದಿದೆ. ದೆಹಲಿಯ ಎನ್‌ಸಿಆರ್ ಭಾಗದಲ್ಲಿ ಪ್ರತಿಷ್ಠಾಪನೆ ಮಾಡುವ ಮರಾಠಿ ಮಿತ್ರ ಮಂಡಳಿ ಈ ಬಾರಿ ಕೇವಲ ಒಂದೂವರೆ ದಿನಕ್ಕೆ ಸೀಮಿತಗೊಳಿಸಲು ನಿರ್ಧರಿಸಿದೆ. ಈ ಬಗ್ಗೆ ಮಾತನಾಡಿರುವ ಆಯೋಜಕಿ ನಿವೇದಿತಾ ಪಾಂಡೆ, ಕಳೆದ 35 ವರ್ಷದಲ್ಲಿ ಇದೇ ಮೊದಲ ಬಾರಿಗೆ ಗಣಪತಿಯನ್ನು ಕೇವಲ ಒಂದೂವರೆ ದಿನದ ಮಟ್ಟಿಗೆ ಪ್ರತಿಷ್ಠಾಪಿಸಲಾಗುತ್ತಿದೆ ಎಂದಿದ್ದಾರೆ.
ಇನ್ನು ಕೆಲವು ಕಡೆ ಕೇವಲ ಆನ್‌ಲೈನ್ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಇನ್ನು ದೆಹಲಿಯ ಸಂಸ್ಥೆಯೊಂದು, ಕಳೆದ 25 ವರ್ಷದಿಂದ ಅದ್ಧೂರಿಯಾಗಿ ಗಣೇಶ ಚತುರ್ಥಿ ಆಚರಿಸಲಾಗುತ್ತಿತ್ತು. ಪ್ರತಿವರ್ಷ ವಿವಿಧ ನಾಟಕ, ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿತ್ತು. ಆದರೆ ಈ ಬಾರಿ ಸಾಮಾಜಿಕ ಜಾಲತಾಣದ ಮೂಲಕ ಭಕ್ತರನ್ನು ಮುಟ್ಟಲು ನಿರ್ಧರಿಸಲಾಗಿದೆ ಎಂದಿದೆ.