ಕೊರೊನಾ ಅಬ್ಬರದ ನಡುವೆಯೇ ಆಚರಿಸುತ್ತಿರುವ ಈ ವರ್ಷದ ಗಣೇಶೋತ್ಸವ ಸ್ವಲ್ಪ ಮಂಕಾಗಿದ್ದರೂ ಸಹ, ಹಬ್ಬದ ಖುಷಿಗೇನೂ ಕಮ್ಮಿ ಇಲ್ಲ ಎನ್ನುವಂತಿದೆ. ಈ ಬಾರಿ ಪರಿಸರ ಸ್ನೇಹಿ ಗಣೇಶನ ಪ್ರತಿಷ್ಠಾಪನೆ ಮಾಡುವ ಟ್ರೆಂಡ್ ಎಲ್ಲಾ ಕಡೆ ಸದ್ದು ಮಾಡುತ್ತಿದೆ.
ಇತ್ತೀಚೆಗೆ ಒಣಹಣ್ಣುಗಳಿಂದ ಮಾಡಿದ ಗಣೇಶನ ಮೂರ್ತಿಯೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿತ್ತು. ಇದೀಗ ಲೂಧಿಯಾನಾದ ರೆಸ್ಟಾರಂಟ್ ಮಾಲೀಕ ಹರ್ಜೀಂದರ್ ಸಿಂಗ್ ಖುಕ್ರೇಜಾ ಚಾಕಲೇಟ್‌ನಲ್ಲಿ ಗಣೇಶ ಮೂರ್ತಿಯನ್ನು ತಯಾರಿಸಿದ್ದಾರೆ.
“ನಾವು ಸತತ 5ನೇ ವರ್ಷ ಗಣೇಶನ ಚಾಕಲೇಟ್ ಮೂರ್ತಿಯನ್ನು ಮಾಡುತ್ತಿದ್ದೇವೆ. ಇದಕ್ಕೆ ನಮಗೆ 10 ದಿನಗಳು ಹಿಡಿದಿದ್ದು, 40 ಕೆಜಿ ಚಾಕ್ಲೇಟ್ ಬಳಸಿಕೊಂಡು10 ಮಂದಿ ಬಾಣಸಿಗರು ಇದನ್ನು ತಯಾರಿಸಿದ್ದಾರೆ. ಪರಿಸರ ಸ್ನೇಹಿಯಾಗಿ ಗಣೇಶೋತ್ಸವದ ಆಚರಣೆ ಮಾಡಲು ಜನರಿಗೆ ಈ ಮೂಲಕ ಪ್ರೇರಣೆ ನೀಡುವುದು ನಮ್ಮ ಉದ್ದೇಶವಾಗಿದೆ” ಎಂದು ಖುಕ್ರೇಜಾ ತಿಳಿಸಿದ್ದಾರೆ.